Advertisement

ವಿಶ್ವಕಪ್‌ : ಪಾಕ್‌ ವಿರುದ್ಧ ಆಡದಿದ್ದರೆ ಭಾರತಕ್ಕೇ ನಷ್ಟ: ಗಾವಸ್ಕರ್‌

10:50 AM Feb 21, 2019 | Team Udayavani |

ಹೊಸದಿಲ್ಲಿ : ‘ಮುಂಬರುವ ವಿಶ್ವ ಕಪ್‌ ಕ್ರಿಕೆಟ್‌ ನಲ್ಲಿ ಪಾಕಿಸ್ಥಾನವನ್ನು ನಿಷೇಧಿಸುವುದರಿಂದ ಭಾರತಕ್ಕೆ ನಷ್ಟವಾಗಲಿದೆ; ಇದಕ್ಕೆ ಬದಲು  ಪಾಕ್‌ ಜತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ನಿಲ್ಲಿಸುವ ಮೂಲಕ ಭಾರತ ಆ ದೇಶಕ್ಕೆ ಸಾಕಷ್ಟು ಘಾಸಿ ಮಾಡಬಹುದಾಗಿದೆ’ ಎಂದು ಭಾರತದ ಮಾಜಿ ಕ್ರಿಕೆಟ್‌ ನಾಯಕ ಸುನಿಲ್‌ ಗಾವಸ್ಕರ್‌ ಹೇಳಿದ್ದಾರೆ.

Advertisement

‘ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಪುಲ್ವಾಮಾ ದಾಳಿ ಎಸಗಿದವರನ್ನು ಹಿಡಿದು ಶಿಕ್ಷಿಸಬೇಕು’ ಎಂದು ಗಾವಸ್ಕರ್‌ ಆಗ್ರಹಿಸಿದ್ದಾರೆ.

ಕನಿಷ್ಠ  40 ಭಾರತೀಯ ಯೋಧರು ಹತರಾಗಿರುವ ಪುಲ್ವಾಮಾ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಸಂಪೂರ್ಣ ಕ್ರಿಕೆಟ್‌ ನಿಷೇಧ ಹೇರಬೇಕೆಂಬ ಕೂಗು ಈಗ ಹಿರಿಯ ಕ್ರಿಕೆಟಿಗ ಹರ್‌ಭಜನ್‌ ಸಿಂಗ್‌ ನೇತೃತ್ವದಲ್ಲಿ ಪ್ರಬಲವಾಗುತ್ತಿದೆ.

ಈಚೆಗೆ ಪ್ರಕಟಗೊಂಡಿರುವ ವಿಶ್ವಕಪ್‌ ಕ್ರಿಕೆಟ್‌ ವೇಳಾಪಟ್ಟಿಯ ಪ್ರಕಾರ ಭಾರತ ಜೂನ್‌ 16ರಂದು ಪಾಕ್‌ ಎದುರಿನ ಪಂದ್ಯವನ್ನು ಆಡಬೇಕಿದೆ.

ಇಂಡಿಯಾ ಟುಡೇ ಗೆ ನೀಡಿರುವ ಸಂದರ್ಶನದಲ್ಲಿ ಗಾವಸ್ಕರ್‌, “ಪಾಕ್‌ ವಿರುದ್ಧದ ವಿಶ್ವಕಪ್‌ ಪಂದ್ಯವನ್ನು ಆಡದಿರಲು ಭಾರತ ನಿರ್ಧರಿಸಿದಲ್ಲಿ  ಯಾರು ಗೆದ್ದ ಹಾಗಾಗುತ್ತದೆ ? ನಾನಂತೂ ಸೆಮಿ, ಫೈನಲ್‌ ಪಂದ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಒಟ್ಟಿನಲ್ಲಿ ಭಾರತ ಆಡದಿದ್ದಲ್ಲಿ ಪಾಕಿಸ್ಥಾನಕ್ಕೆ ಎರಡು ಅಂಕಗಳ ಸಿಗುತ್ತವೆ ಎನ್ನುವುದು ಮುಖ್ಯ’ ಎಂದು ಹೇಳಿದರು. 

Advertisement

”ವಿಶ್ವ ಕಪ್‌ ನಲ್ಲಿ ಪ್ರತೀ ಬಾರಿಯೂ ಭಾರತ ಪಾಕಿಸ್ಥಾನವನ್ನು ಸೋಲಿಸಿದೆ; ಆದರೆ ನಾವು ಅದರ ವಿರುದ್ಧ ಈ ಬಾರಿ ಆಡದಿದ್ದರೆ ಅದಕ್ಕೆ ಎರಡು ಅಂಕಗಳನ್ನು ಬಿಟ್ಟುಕೊಟ್ಟ ಹಾಗಾಗುತ್ತದೆ; ಆದರ ಬದಲು ನಾವು ಪಾಕ್‌ ವಿರುದ್ಧ ಆಡಿ ಎರಡಂಕ ಪಡೆದುಕೊಂಡರೆ, ಪಾಕಿಸ್ಥಾನ ವಿಶ್ವ ಕಪ್‌ ಸ್ಪರ್ಧೆಯಲ್ಲಿ  ಮುಂದೆ ಸಾಗದಂತೆ ಮಾಡಬಹುದಾಗಿದೆ” ಎಂದು ಗಾವಸ್ಕರ್‌ ಹೇಳಿದರು. 

”ಹಾಗಿದ್ದರೂ ನಾನು ನಮ್ಮ  ದೇಶ, ಸರಕಾರ ಏನು ನಿರ್ಧರಿಸುತ್ತದೋ ಅದರೊಂದಿಗೆ ಇರುತ್ತೇನೆ; ಒಂದು ವೇಳೆ ನಮ್ಮ ದೇಶ ಪಾಕ್‌ ವಿರುದ್ಧ ಆಡದಿರಲು ನಿರ್ಧರಿಸಿದರೆ ನಾನು ನಮ್ಮ ದೇಶದ ಜತೆಗೇ ಇರುತ್ತೇನೆ” ಎಂದು ಗಾವಸ್ಕರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next