ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 14,348 ನೂತನ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, 805 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ(ಅಕ್ಟೋಬರ್ 29) ಬಿಡುಗಡೆಗೊಳಿಸಿರುವ ಅಂಕಿ ಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಇದೀಗ ಒಂದೇ ಕಡೆ ಮಿಯಾ ಬೈ ತನಿಷ್ಕ್, ಟೈಟಾನ್ ಐಪ್ಲಸ್, ತನೈರಾ, ಹಿಲಿಯೋಸ್ ಲಭ್ಯ
ದೇಶಾದ್ಯಂತ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,42,46,157ಕ್ಕೆ ಏರಿಕೆಯಾಗಿದೆ. ಅಲ್ಲದೇ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವವರ ಸಂಖ್ಯೆ 4,57,191ಕ್ಕೆ ತಲುಪಿದೆ ಎಂದು ಅಂಕಿಅಂಶ ಹೇಳಿದೆ.
ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,61,334ಕ್ಕೆ ಇಳಿಕೆಯಾಗಿದೆ. ಇದು 2020ರ ಮಾರ್ಚ್ ನಂತರದ ಕಡಿಮೆ ಪ್ರಮಾಣದ ಸಂಖ್ಯೆಯಾಗಿದೆ ಎಂದು ವಿವರಿಸಿದೆ. ಕಳೆದ 24ಗಂಟೆಗಳಲ್ಲಿ 13,198 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 3,36,27,632 ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಸತತ 35 ದಿನಗಳಿಂದ ದಿನಂಪ್ರತಿ ಕೋವಿಡ್ ಪ್ರಕರಣಗಳ ಸಂಖ್ಯೆ 30,000ಕ್ಕಿಂತ ಕಡಿಮೆ ವರದಿಯಾಗುತ್ತಿದೆ. ಇದು ಕಳೆದ 124 ದಿನಗಳ ಬಳಿಕದ ಕನಿಷ್ಠ ಸಂಖ್ಯೆಯಾಗಿದೆ. ಗುರುವಾರ ದೇಶದಲ್ಲಿ 16,156 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 733 ಮಂದಿ ಸಾವನ್ನಪ್ಪಿದ್ದರು.