ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದೇಶದ ಕ್ರಿಕೆಟ್ ಆಯಾಮವನ್ನೇ ಬದಲಿಸಿದೆ ಎಂಬುದಾಗಿ ಟೀಮ್ ಇಂಡಿಯಾದ ಮಾಜಿ ಕೋಚ್, ವಿಶ್ವವಿಖ್ಯಾತ ಸ್ಪಿನ್ನರ್ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
“ಈ ಟಿ20 ಕ್ರಿಕೆಟ್ ಪಂದ್ಯಾವಳಿಯ ಆರಂಭದಿಂದ ದೇಶದ ಅನೇಕ ಮಂದಿ ಯುವ ಹಾಗೂ ಪ್ರತಿಭಾನ್ವಿತ ಆಟಗಾರರ ಕೌಶಲ ಪ್ರದರ್ಶನಕ್ಕೊಂದು ವೇದಿಕೆ ಲಭಿಸಿದೆ. ಇದರಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವಾಗ ಎದುರಾಗುವ ಭೀತಿ ಕೂಡ ದೂರಾಗಿದೆ’ ಎಂದು ಕುಂಬ್ಳೆ ಹೇಳಿದರು.
“ಈಗಿನ ಯುವ ಕ್ರಿಕೆಟಿಗರ ಆತ್ಮವಿಶ್ವಾಸ ಬಹಳ ಉನ್ನತ ಮಟ್ಟದ್ದು. ಆ ಕಾಲದಲ್ಲಿ ನಾವು ಇಷ್ಟೊಂದು ಆತ್ಮವಿಶ್ವಾಸ ಹೊಂದಿರಲಿಲ್ಲ. ನಾನು ಜಿಮ್‌ಗೆ ಹೋದದ್ದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿ 9 ವರ್ಷಗಳ ಬಳಿಕ. ಅದೂ ಗಾಯಾಳಾದ್ದರಿಂದ. ಆದರೆ ಇಂದು ಆರಂಭದಲ್ಲೇ ಎಲ್ಲ ಅನುಕೂಲಗಳೂ ಕ್ರಿಕೆಟಿಗರಿಗೆ ಲಭಿಸುತ್ತಿವೆ. ಇದಕ್ಕಾಗಿ ಐಪಿಎಲ್‌ಗೆ ಥ್ಯಾಂಕ್ಸ್ ಹೇಳಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಐಪಿಎಲ್ ಒಂದು ಉತ್ತಮ ಬುನಾದಿ’ ಎಂದು ದುಬಾೖಯಲ್ಲಿ ನಡೆದ ಶ್ಯಾಮ್ ಭಾಟಿಯ ಕ್ರಿಕೆಟ್ ಪ್ರಶಸ್ತಿ ಸಮಾರಂಭದ ವೇಳೆ ಕುಂಬ್ಳೆ ಹೇಳಿದರು.
“ಐಪಿಎಲ್ ಸುಮಾರು 50 ದಿನಗಳ ಕಾಲ ನಡೆಯುತ್ತದೆ. ಈ ವೇಳೆ ವಿವಿಧ ದೇಶಗಳ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಕೂಡ ವಿಶೇಷ ಅನುಭವ. ತಯಾರಿ, ಕಾರ್ಯ ವಿಧಾನ, ಮಾನಸಿಕ ಸಿದ್ಧತೆಗೆಲ್ಲ ಇದೊಂದು ಪಾಠ. ಮೊದಲಾದರೆ 4 ವರ್ಷಕ್ಕೊಮ್ಮೆ ಆಸ್ಟ್ರೇಲಿಯ, ಇಂಗ್ಲೆಂಡ್ ಮೊದಲಾದೆಡೆಗೆ ತೆರಳಿ ಅಲ್ಲಿನ ಆಟಗಾರರೊಂದಿಗೆ ಆಡಬೇಕಿತ್ತು. ಆದರೆ ಐಪಿಎಲ್‌ನಲ್ಲಿ ಪ್ರತಿ ವರ್ಷವೂ ವಿದೇಶಿ ಆಟಗಾರರ ಜತೆ ಹಾಗೂ ವಿರುದ್ಧ ಆಡಬಹುದಾಗಿದೆ’ ಎಂದರು.