Advertisement

ಹತ್ತು ಹಾಟ್‌ಸ್ಪಾಟ್‌ಗಳಲ್ಲಿ ಭಾರತ ಸೇರ್ಪಡೆ

02:28 AM May 26, 2020 | Sriram |

ಹೊಸದಿಲ್ಲಿ: ಕೋವಿಡ್-19 ವಿರುದ್ಧದ ಸಮರ್ಪಕ ಹೋರಾಟದ ಹೊರತಾಗಿಯೂ ದೇಶದಲ್ಲಿ ಒಂದೇ ದಿನ 7 ಸಾವಿರ ಹೊಸ ಪ್ರಕರಣಗಳು ದಾಖಲಾಗಿದ್ದು, ಭಾರತವು ಇರಾನ್‌ ಹಿಂದಿಕ್ಕಿ ಜಗತ್ತಿನ 10 ಅತೀ ದೊಡ್ಡ ಹಾಟ್‌ಸ್ಪಾಟ್‌ ದೇಶಗಳ ಯಾದಿಗೆ ಸೇರ್ಪಡೆಯಾಗಿದೆ.

Advertisement

ಸತತ 5 ದಿನಗಳಿಂದ ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿದ್ದ ರಿಂದಲೇ ದೇಶ 10 ಹಾಟ್‌ಸ್ಪಾಟ್‌ಗಳಲ್ಲಿ ಸ್ಥಾನ ಪಡೆದಿದೆ. ರವಿವಾರ ಬೆಳಗ್ಗೆ 8ರಿಂದ ಸೋಮವಾರ ಬೆಳಗ್ಗೆ 8ರ ವರೆಗಿನ ಅವಧಿಯಲ್ಲಿ ದೇಶಾದ್ಯಂತ 6,977 ಮಂದಿಗೆ ಸೋಂಕು ದೃಢಪಟ್ಟಿದೆ, ಸಾವಿನ ಸಂಖ್ಯೆ 4 ಸಾವಿರ ದಾಟಿದೆ. ಒಟ್ಟು ಪ್ರಕರಣ ಸಂಖ್ಯೆ 1.5 ಲಕ್ಷದತ್ತ ದಾಪುಗಾಲಿಡುತ್ತಿದೆ. ಹೀಗಾಗಿ ಕೋವಿಡ್-19 ಪೀಡಿತ ಪ್ರಮುಖ ದೇಶಗಳ ಸಾಲಿನಲ್ಲಿ ಭಾರತ 10ನೇ ಸ್ಥಾನಕ್ಕೇರಿದೆ. 10 ಹಾಟ್‌ಸ್ಪಾಟ್‌ಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಬ್ರೆಜಿಲ್‌ 2ನೇ ಸ್ಥಾನದಲ್ಲಿದೆ. ಚೀನ 14ನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು
ಮಹಾರಾಷ್ಟ್ರದಲ್ಲೇ ಅತೀ ಹೆಚ್ಚು ಸೋಂಕುಪೀಡಿತರಿದ್ದಾರೆ. ರವಿವಾರ ರಾತ್ರಿ ವೇಳೆಗೆ ಅಲ್ಲಿ ಪ್ರಕರಣಗಳ ಸಂಖ್ಯೆ 50 ಸಾವಿರ ದಾಟಿತ್ತು. ಹಾಗೆಯೇ ಕಳೆದ 24 ತಾಸುಗಳ ಅವಧಿಯಲ್ಲಿ ದೇಶಾದ್ಯಂತ 154 ಮಂದಿ ಬಲಿಯಾಗಿದ್ದು, ಅತೀ ಹೆಚ್ಚು ಅಂದರೆ 58 ಮಂದಿ ಮಹಾರಾಷ್ಟ್ರದಲ್ಲೇ ಸಾವಿಗೀಡಾಗಿದ್ದಾರೆ. ಅಲ್ಲಿ ಇದುವರೆಗೆ 1,635 ಮಂದಿ ಮೃತಪಟ್ಟಿದ್ದಾರೆ. ದಿಲ್ಲಿಯಲ್ಲಿ 30, ಗುಜರಾತ್‌ನಲ್ಲಿ 29, ಮಧ್ಯಪ್ರದೇಶದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಈ ವರೆಗೆ ಒಟ್ಟಾರೆ 57,720 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದು, ಗುಣ ಹೊಂದಿದವರ ಪ್ರಮಾಣ ಶೇ.41.57ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದ ಒಟ್ಟು ಕೋವಿಡ್-19 ಸೋಂಕುಗಳ ಪೈಕಿ 7 ರಾಜ್ಯಗಳ 11 ಮಹಾ ನಗರಪಾಲಿಕೆ ಪ್ರದೇಶ ವ್ಯಾಪ್ತಿಯಲ್ಲಿ ಶೇ.70ರಷ್ಟು ವರದಿಯಾಗಿವೆ. ಈ ಪಾಲಿಕೆಗಳು ಮಹಾರಾಷ್ಟ್ರ, ತಮಿಳುನಾಡು, ಗುಜರಾತ್‌, ದಿಲ್ಲಿ, ಮಧ್ಯಪ್ರದೇಶ, ಪಶ್ಚಿಮ ಬಂಗಾಲ ಮತ್ತು ರಾಜಸ್ಥಾನದಲ್ಲಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇತರ ರಾಜ್ಯಗಳಲ್ಲೂ ಏರಿಕೆ
ಇತರ ರಾಜ್ಯಗಳಲ್ಲೂ ಸೋಂಕುಪೀಡಿತರ ಸಂಖ್ಯೆ ಏರುತ್ತಿದೆ. ಅಸ್ಸಾಂನಲ್ಲಿ ಸೋಮವಾರ 74 ಮಂದಿಗೆ ಸೋಂಕು ದೃಢಪಟ್ಟಿದೆ. ಮಣಿಪುರದಲ್ಲೂ ಈಗ ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ಒಟ್ಟು ಸಂಖ್ಯೆ 34ಕ್ಕೇರಿದೆ.

Advertisement

ಮೂರು ದೇಶಗಳಲ್ಲಿ ಹೆಚ್ಚಳ
ಕಳೆದ ಕೆಲವು ವಾರಗಳಲ್ಲಿ ಬ್ರೆಜಿಲ್‌, ರಷ್ಯಾ ಮತ್ತು ಭಾರತದಲ್ಲಿ ಪ್ರತಿ ದಿನವೂ ಸೋಂಕುಪೀಡಿತರ ಸಂಖ್ಯೆ ಹೆಚ್ಚಳವಾಗುತ್ತ ಬಂದಿದೆ. ಕಳೆದ ಒಂದು ವಾರದಲ್ಲಿ ಜಗತ್ತಿನಾದ್ಯಂತ ಪತ್ತೆಯಾದ ಹೊಸ ಪ್ರಕರಣಗಳ ಪೈಕಿ ಶೇ.32ಕ್ಕೂ ಹೆಚ್ಚು ಪ್ರಕರಣಗಳು ಈ ಮೂರು ದೇಶಗಳಲ್ಲಿ ದಾಖಲಾಗಿವೆ. ಒಂದು ತಿಂಗಳ ಹಿಂದೆ ಈ ದೇಶಗಳ ಸೋಂಕುಪೀಡಿತರ ಪ್ರಮಾಣ ಶೇ.12 ಮತ್ತು 2 ತಿಂಗಳ ಹಿಂದೆ ಶೇ.2.3 ಆಗಿತ್ತು.

ಬ್ರೆಜಿಲ್‌
ಮಾದರಿಯಲ್ಲೇ ಸಾಗುತ್ತಿದೆ ಭಾರತ
10 ಕೋವಿಡ್-19 ಹಾಟ್‌ಸ್ಪಾಟ್‌ ದೇಶಗಳ ಪರಿಸ್ಥಿತಿಗೆ ಹೋಲಿಸಿದರೆ, ಭಾರತದಲ್ಲಿ ಸೋಂಕುಪೀಡಿತರ ಸಂಖ್ಯೆಯ ಪಥವು ಇಳಿಮುಖವಾಗದೆ ಒಂದೇ ಗತಿಯಲ್ಲಿ ಸಾಗಿದೆ. ಭಾರತವು ಈ ವಿಚಾರದಲ್ಲಿ ಬ್ರೆಜಿಲ್‌ ಅನ್ನು ಅನುಸರಿಸುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. 2ನೇ ಅತೀ ಹೆಚ್ಚು ಪ್ರಕರಣಗಳಿರುವ ದೇಶ ಎಂಬ ಹಣೆಪಟ್ಟಿಯನ್ನು ಬ್ರೆಜಿಲ್‌ ಈಗಾಗಲೇ ಪಡೆದಿದೆ. ಅಲ್ಲಿ 15 ದಿನಗಳ ಹಿಂದೆ ಇದ್ದಷ್ಟು ಪ್ರಕರಣ ಸದ್ಯ ಭಾರತದಲ್ಲಿವೆ. ಹಾಗಾಗಿ ಇಲ್ಲಿ ಪ್ರಕರಣಗಳ ಸಂಖ್ಯೆ ಸ್ವಲ್ಪವೂ ಇಳಿಮುಖವಾಗದೆ ಇದ್ದರೆ, ನಾವು ಬ್ರೆಜಿಲ್‌ ಪಥದಲ್ಲೇ ಸಾಗುವ ಸಾಧ್ಯತೆ ಇದೆ. ಸದ್ಯ ದೇಶದಲ್ಲಿ ಸೋಂಕು ದ್ವಿಗುಣ ಅವಧಿ 13 ದಿನಗಳಾಗಿದ್ದು, ಮುಂದಿನ 13 ದಿನಗಳಲ್ಲಿ 2.70 ಲಕ್ಷ ಪ್ರಕರಣ ಪತ್ತೆಯಾಗುವ ಭೀತಿಯೂ ಇದೆ.

ಜೂನ್‌ನಲ್ಲಿ ಸ್ಥಿತಿ ಮತ್ತಷ್ಟು ಗಂಭೀರ ?
ದೇಶಾದ್ಯಂತ ಪ್ರಕರಣ ಸಂಖ್ಯೆ ಶರವೇಗದಲ್ಲಿ ಏರುತ್ತಿರುವುದನ್ನು ನೋಡಿದರೆ ಜೂನ್‌ ತಿಂಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡು ತಿಂಗಳ ಕಾಲ ಜಗತ್ತಿನಲ್ಲೇ ಅತೀ ಕಠಿನ ನಿರ್ಬಂಧವನ್ನು ಭಾರತ ಪಾಲಿಸಿ ಬಳಿಕ ಲಾಕ್‌ಡೌನ್‌ ಸಡಿಲಿಸಲಾಗಿದೆ. ಇದರ ಬೆನ್ನಿಗೆ ಸೋಂಕುಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಮುಂದಿನ ಕೆಲವು ವಾರಗಳಲ್ಲಿ ಇನ್ನೂ ವಿಷಮಕ್ಕೆ ತಿರು ಗುವ ಸಾಧ್ಯತೆಯಿದೆ. ಜೂನ್‌ನಲ್ಲಿ ಸೋಂಕು ಕಾಳಿYಚ್ಚಿನಂತೆ ಹೆಚ್ಚಲಿದ್ದು, ಜುಲೈಯಲ್ಲಿ ಉತ್ತುಂಗ ತಲುಪಲಿದೆ ಎಂದು ತಜ್ಞರು ತಿಳಿಸಿದ್ದಾರೆ.

01-ಅಮೆರಿಕ 16,93,157

02-ಬ್ರೆಜಿಲ್‌ 3,65,213

03-ರಷ್ಯಾ 3,53,427

04-ಸ್ಪೇನ್‌ 2,82,852

05-ಬ್ರಿಟನ್‌ 2,59,559

06-ಇಟಲಿ 2,30,158

07-ಫ್ರಾನ್ಸ್‌ 1,82,584

08-ಜರ್ಮನಿ 1,80,602

09-ಟರ್ಕಿ 1,56,827

10-ಭಾರತ 1,44,135

Advertisement

Udayavani is now on Telegram. Click here to join our channel and stay updated with the latest news.

Next