ಬೆಳಗಾವಿ: ಭಾರತ- ಜಪಾನ್ ಸೇನೆಯ ಜಂಟಿ ಸಮರಾಭ್ಯಾಸ ‘ಧರ್ಮ ಗಾರ್ಡಿಯನ್ 2022′ ಕಾರ್ಯಕ್ರಮ ಬೆಳಗಾವಿಯಲ್ಲಿ ಆರಂಭಗೊಂಡಿದ್ದು, ಮಂಗಳವಾರದಿಂದ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ ಶುರುವಾಗಿದೆ.
ಇಲ್ಲಿನ ಮರಾಠಾ ಲಘು ಪದಾತಿ ದಳ ಕೇಂದ್ರಕ್ಕೆ ಫೆಬ್ರವರಿ 27ಕ್ಕೆ ಬೆಳಗಾವಿಗೆ ಆಗಮಿಸಿರುವ ಜಪಾನ್ ಸೇನೆ ಭಾರತ ಸೇನೆ ಜಂಟಿ ಸಮರಾಭ್ಯಾಸ ನಡೆಸುತ್ತಿವೆ. ಈ ಸಮರಾಭ್ಯಾಸ ಮಾರ್ಚ್ 10ರ ವರೆಗೆ ನಡೆಯಲಿದೆ. ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠ ಲೈಟ್ ಇನ್ಫಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಸಮರಾಭ್ಯಾಸದಲ್ಲಿ ಪಾಲ್ಗೊಂಡಿವೆ.
ಇದನ್ನೂ ಓದಿ:ರಷ್ಯಾ ಯುದ್ಧದ ಪರಿಣಾಮ; ಷೇರುಪೇಟೆ ಸೆನ್ಸೆಕ್ಸ್ ಇಳಿಕೆ, ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆ
ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ ಇದಾಗಿದೆ. ಯುದ್ಧದ ಸನ್ನಿವೇಶ, ಭಯೋತ್ಪಾದಕರ ದಮನ, ಒತ್ತೆಯಾಳುಗಳ ರಕ್ಷಣೆ, ಭಯೋತ್ಪಾದಕ ಅಡಗು ತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಶಸ್ತ್ರಾಸ್ತ್ರ ರಹಿತ ಯುದ್ಧ ಸೇರಿದಂತೆ ವಿವಿಧ ಹಂತದ ಕಾರ್ಯಾಚರಣೆಗಳ ಅಣಕು ಪ್ರದರ್ಶನ ಉಭಯ ಸೇನೆ ಮಾಡಲಿವೆ.