ಬೆಂಗಳೂರು: ಭಾರತವು ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಅಮೆರಿಕ, ಚೀನಾ ನಂತರ ಭಾರತವನ್ನು ಜಗತ್ತಿನ ಮೂರನೇ ಅತಿ ದೊಡ್ಡ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರವನ್ನಾಗಿ ಹೊರಹೊಮ್ಮುವಂತೆ ಮಾಡಲು ಪ್ರಯತ್ನ ನಡೆದಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಅಶುತೋಷ್ ಶರ್ಮಾ ಹೇಳಿದರು.
ನಗರದಲ್ಲಿ ಗುರುವಾರ ಆರಂಭವಾದ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಸದ್ಯ 2000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳಿಗೆ ಉತ್ತೇಜನ ನೀಡುತ್ತಿದ್ದು, ಇದನ್ನು ದುಪ್ಪಟ್ಟುಗೊಳಿಸಿ ಈ ಕ್ಷೇತ್ರದಲ್ಲಿ ಉನ್ನತ ಪ್ರಗತಿ ಸಾಧಿಸಲು ಪ್ರಯತ್ನ ಮುಂದುವರಿದಿದೆ’ ಎಂದು ಹೇಳಿದರು.
ರಾಜ್ಯ ಮಾಹಿತಿ- ಜೈವಿಕ ತಂತ್ರಜ್ಞಾನ, ವಿಜ್ಞಾನ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಬೆಂಗಳೂರು ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ಅತಿ ದೊಡ್ಡ ಜಾಲ ಹೊಂದಿದೆ. ಇತ್ತೀಚೆಗೆ ಸ್ಟಾರ್ಟ್‌ಅಪ್ ಕೇಂದ್ರವಾಗಿಯೂ ರೂಪುಗೊಳ್ಳುತ್ತಿದ್ದು, ಸಾಕಷ್ಟು ಕ್ರಿಯಾಶೀಲ ಚಟುವಟಿಕೆಗಳು ನಡೆಯುತ್ತಿವೆ.
ಬೆಂಗಳೂರಿನಲ್ಲಿ ತಾಂತ್ರಿಕ ಕುಶಲ ಮಾನವ ಸಂಪನ್ಮೂಲವಿರುವುದರಿಂದ ಹೂಡಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು. ಬೆಳಗಾವಿಯಂತಹ ದ್ವಿತೀಯ ಹಂತದ ನಗರಗಳೂ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿವೆ. ವೈಮಾನಿಕ ವಲಯ, ಆಟೋಮೊಬೈಲ್ ಕ್ಷೇತ್ರಗಳಲ್ಲೂ ಗಣನೀಯ ಸಾಧನೆ ತೋರಲು ಅವಕಾಶವಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ.
ರಾಜ್ಯ ಸರ್ಕಾರವೇ ಇನ್‌ಕುಬೇಷನ್ ಸೆಂಟರ್‌ಗಳನ್ನು (ಸಂಶೋಧನಾ ಕೇಂದ್ರ) ತೆರೆದಿದ್ದು, ತ್ಯಾಜ್ಯ ಸಂಸ್ಕರಣೆ, ಆರೋಗ್ಯ, ಪರಿಸರ ಮಾಲಿನ್ಯ ನಿಯಂತ್ರಣ, ಕೃಷಿ ಇತರೆ ಕ್ಷೇತ್ರಗಳಿಗೆ ಅನುದಾನ ಸಹ ನೀಡುತ್ತಿದೆ ಎಂದು ಹೇಳಿದರು.
ಕರ್ನಾಟಕವು ರಾಷ್ಟ್ರದ ಜ್ಞಾನ ರಾಜಧಾನಿಯಾಗಿರುವ ಜತೆಗೆ ರೋಬೋಟಿಕ್ಸ್, ಮಾಹಿತಿ ವಿಜ್ಞಾನದ ಉತ್ಕೃಷ್ಟ ಕೇಂದ್ರವಾಗಿ ಹೊರಹೊಮ್ಮಿದ್ದು, ಹೊಸ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ಸಂಶೋಧನೆ ಎಂಬುದು ಸವಾಲೆನಿಸಿದ್ದು, ಉದ್ಯೋಗ ಸೃಷ್ಟಿಯ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ರಂಗಗಳ ಪಾತ್ರವೂ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಎಫ್ಐಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು.