Advertisement

ಶಿಕ್ಷಣಕ್ಕೆ ಭಾರತವೇ ಭೂಷಣ

12:30 AM Jul 06, 2019 | Lakshmi GovindaRaj |

ದೇಶದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅಮೂಲಾಗ್ರ ಬದಲಾವಣೆ ತರಲು ಈಗಾಗಲೇ “ರಾಷ್ಟ್ರೀಯ ಶಿಕ್ಷಣ ಕರಡು ನೀತಿ’ ರೂಪಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ, ಈ ಬಜೆಟ್‌ನಲ್ಲಿ ಅದನ್ನು ಕಾರ್ಯರೂಪಕ್ಕಿಳಿಸಲು ಮುಂದಾಗಿದೆ.

Advertisement

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ, ಸಂಶೋಧನೆ, ಗುಣಮಟದ ಶಿಕ್ಷಣ, ಆನ್‌ಲೈನ್‌ ಕಲಿಕೆ, ಕೌಶಲ್ಯಾಧಾರಿತ ಶಿಕ್ಷಣ, ವಿದೇಶಿ ವಿದ್ಯಾರ್ಥಿಗಳ ಸೆಳೆತ, ವಿಶೇಷ ಅನುದಾನ, ವಿಶ್ವದರ್ಜೆ ವಿಶ್ವವಿದ್ಯಾಲಯಗಳ ಸ್ಥಾಪನೆಯ ಗುರಿಯೊಂದಿಗೆ “ಹೊಸ ಶಿಕ್ಷಣ ನೀತಿ’ ಜಾರಿಗೊಳಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಜಾಗತಿಕ ವಿವಿ ಸ್ಥಾಪನೆ ಗುರಿ:ವಿಶ್ವದ ಅಗ್ರ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಈಗಾಗಲೇ ಭಾರತದ ಒಂದು ಐಐಟಿ ಹಾಗೂ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಮಾತ್ರ ಸೇರ್ಪಡೆಯಾಗಿದೆ. ಮತ್ತಷ್ಟು ವಿಶ್ವಶ್ರೇಷ್ಠ ವಿವಿಗಳನ್ನು ಸ್ಥಾಪಿಸಿ, ಈ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಈ ಆಯವ್ಯಯದಲ್ಲಿ 400 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಭಾರತದಲ್ಲಿ ಓದಿ: ತಂತ್ರಜ್ಞಾನ ಹಾಗೂ ವೈದ್ಯಕೀಯ ಶಿಕ್ಷಣಕ್ಕಾಗಿ ವಿದೇಶಿ ವಿದ್ಯಾರ್ಥಿಗಳನ್ನು ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೆಳೆಯುವ ನಿಟ್ಟಿನಲ್ಲಿ “ಭಾರತದಲ್ಲಿ ಓದಿ’ ಕಾರ್ಯಕ್ರಮ ರೂಪಿಸಲಾಗಿದೆ. ಆನ್‌ಲೈನ್‌ ಕೋರ್ಸ್‌ಗಳನ್ನು ಉತ್ತೇಜಿಸಲು “ಅಧ್ಯಯನ’ ಯೋಜನೆ ರೂಪಿಸಿದ್ದು, ವಿದೇಶಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನೆರವಾಗಲಿದೆ.

ಸಂಶೋಧನೆ: ಉನ್ನತ ಹಾಗೂ ತಂತ್ರಜ್ಞಾನ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಅಂತಾರಾಷ್ಟ್ರೀಯ ಸಂಶೋಧನಾ ಫೌಂಡೇಷನ್‌ ಸ್ಥಾಪನೆ, ಕೃತಕ ಬುದ್ಧಿಮತ್ತೆ ಹಾಗೂ ಬಿಗ್‌ ಡಾಟಾ ರೊಬೊಟಿಕ್‌ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಲಾಗಿದೆ. ಬೋಧನೆ ಗುಣಮಟ್ಟ ಸುಧಾರಿಸಲು ಉನ್ನತ ಶಿಕ್ಷಣದಲ್ಲಿ ಶೈಕ್ಷಣಿಕ ಜಾಲಗಳ ಜಾಗತಿಕ ಕಾರ್ಯಕ್ರಮ ಯೋಜನೆ (ಜೆಎಐನ್‌-ಗೈನ್‌) ರೂಪಿಸಲಾಗಿದೆ.

Advertisement

ಐಐಟಿ ಹಾಗೂ ಐಐಎಸ್‌ನಲ್ಲಿ ಇಂಪ್ಯಾಕ್ಟಿಂಗ್‌ ರಿಸರ್ಚ್‌ ಇನ್ನೋವೇಷನ್‌ ಆ್ಯಂಡ್‌ ಟೆಕ್ನಾಲಜಿ (ಇನ್‌ಪ್ರಿಂಟ್‌ ) ಯೋಜನೆ ಆರಂಭಿಸಲಾಗಿದೆ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಉನ್ನತ ಶಿಕ್ಷಣ ಆಯೋಗ (ಎಚ್‌ಇಸಿಐ) ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಡಿಜಿಟಲ್‌ ಸಾಕ್ಷರತೆ: ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್‌ ಸಾಕ್ಷರತಾ ಅಭಿಯಾನದಡಿ ಈಗಾಗಲೇ ಜಾರಿಗೆ ತರಲಾಗಿರುವ ಭಾರತ್‌ ನೆಟ್‌ ಯೋಜನೆಗೆ ಜಾಗತಿಕ ಸೇವಾ ಬಾಧ್ಯತಾ ಅನುದಾನದ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು.

ಬಜೆಟ್‌ ಅನುದಾನ: ಈ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ 94,854 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಪೈಕಿ ಉನ್ನತ ಶಿಕ್ಷಣಕ್ಕೆ 38,317 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕೂ ಆದ್ಯತೆ ನೀಡಲಾಗಿದ್ದು, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಕಾರ್ಯಕ್ರಮಗಳಿಗೆ 56,536 ಕೋಟಿ ರೂ. ನಿಗದಿಪಡಿಸಲಾಗಿದೆ. ಕಳೆದ ಬಾರಿಗಿಂತ 10,000 ಕೋಟಿ ರೂ. ಹೆಚ್ಚಿಸಲಾಗಿದೆ.

ಯುವಕರಿಗೆ ಉದ್ಯೋಗ: ದೇಶದ ಯುವಜನತೆಗೆ ರೊಬೊಟಿಕ್‌ ತಂತ್ರ ಜ್ಞಾನ ಉದ್ಯಮ, ಕೃತಕ ಬುದ್ಧಿಮತ್ತೆ, ಅಂತರ್ಜಾಲ, ಬಿಗ್‌ ಡೇಟಾ, ತ್ರಿ-ಡಿ ಮುದ್ರಣ ಮತ್ತಿತರ ಆಧುನಿಕ ತಂತ್ರ ಜ್ಞಾನಗಳಲ್ಲಿ ಕೌಶಲ್ಯ ತರಬೇತಿ ನೀಡಿ, ಅವ ರಿಗೆ ಉತ್ತಮ ವೇತ ನದ ಉದ್ಯೋಗಾವಕಾಶ  ಸೃಷ್ಟಿಸುವುಗಾಗಿ ಹೇಳಿದರು.

ಸ್ಟಾಂಡ್‌ ಅಪ್‌ ಯೋಜನೆ: ಸ್ಟಾಂಡ್‌ ಅಪ್‌ ಯೋಜನೆಯಡಿ 2 ವರ್ಷದಲ್ಲಿ 300 ಉದ್ಯಮ ಸ್ಥಾಪನೆ ಗುರಿ ಹೊಂದಲಾಗಿದೆ. ಎಸ್ಸಿ, ಎಸ್ಟಿ ಉದ್ಯಮಿಗಳಿಗೆ ತಮ್ಮ ಸ್ವಂತ ಉದ್ಯೋಗ ಆರಂಭಿಸಲು ಬೇಕಾದ ಎಲ್ಲಾ ನೆರವು ನೀಡಲಾಗಿದೆ. 2020-25ರವರೆಗೂ ಈ ಯೋಜನೆ ಮುಂದುವರಿಯಲಿದೆ. ಮುದ್ರಾ ಯೋಜನೆಯಡಿ ಸಾಲ ನೀಡಿ ಸ್ವಯಂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದೆ. ಮಹಿಳಾ ಸ್ವ ಸಹಾಯ ಸಂಘಗಳ ಪ್ರತಿ ಸದಸ್ಯರಿಗೆ ಒಂದು ಲಕ್ಷ ರೂ. ಸಾಲ ನೀಡಲು ಉದ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next