Advertisement

ODI ಆಸೀಸ್‌ ಸವಾಲು ಎದುರಿಸಲು ಭಾರತ ಸನ್ನದ್ಧ

11:47 PM Sep 21, 2023 | Team Udayavani |

ಮೊಹಾಲಿ: ಏಷ್ಯಾ ಕಪ್‌ ವಿಜೇತ ಭಾರತ ತಂಡವು ಶುಕ್ರವಾರದಿಂದ ಆರಂಭವಾಗುವ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಇದು ಮುಂದಿನ ತಿಂಗಳ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸಲು ಭಾರತಕ್ಕೆ ಸಿಗುವ ಕೊನೆಯ ಸರಣಿಯಾಗಿದೆ.

Advertisement

ಈ ಮಹತ್ವದ ಸರಣಿಯ ಮೊದಲೆ ರಡು ಪಂದ್ಯಗಳಿಗೆ ನಾಯಕ ರೋಹಿತ್‌ ಶರ್ಮ ಮತ್ತು ಅನುಭವಿ ವಿರಾಟ್‌ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದರ ಜತೆ ಪ್ರಮುಖ ಸ್ಪಿನ್ನರ್‌ ಕುಲದೀಪ್‌ ಯಾದವ್‌, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರೂ ಆಡುವುದಿಲ್ಲ. ಹೀಗಾಗಿ ತಂಡದ ಇನ್ನುಳಿದ ಆಟಗಾರರ ಶಕ್ತಿ ಸಾಮರ್ಥ್ಯವನ್ನು ಪರಿಶೀಲಿಸಲು ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಗಿದು ಕೊನೆಯ ಅವಕಾಶವಾಗಿದೆ.

ಫಿಟ್‌ನೆಸ್‌ ಮತ್ತು ಫಾರ್ಮ್ಗೆ ಮರಳಲು ಪ್ರಯತ್ನಿಸುವ ಶ್ರೇಯಸ್‌ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಅವರಿಗಿದು ಈ ಸರಣಿ ಅತ್ಯಂತ ಪ್ರಮುಖ ಎನ್ನಲಾಗಿದೆ. ವಿಶ್ವಕಪ್‌ನಲ್ಲಿ ಆಡಲು ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಅವರಿಬ್ಬರು ಈ ಸರಣಿಯಲ್ಲಿ ಗಮನಾರ್ಹ ನಿರ್ವಹಣೆ ನೀಡುವ ಅಗತ್ಯವಿದೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 28ರ ಹರೆಯದ ಶ್ರೇಯಸ್‌ ಕಳೆದ ಆರು ತಿಂಗಳಲ್ಲಿ ಹೆಚ್ಚಿನ ಕ್ರಿಕೆಟ್‌ ಆಡಿಲ್ಲ. ಏಷ್ಯಾ ಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧದ ಪಂದ್ಯಕ್ಕಿಂತ ಮೊದಲು ಬೆನ್ನಿನ ಸ್ನಾಯು ಸಮಸ್ಯೆಯಿಂದಾಗಿ ಅವರ ಫಿಟ್‌ನೆಸ್‌ ಬಗ್ಗೆ ಅನುಮಾನ ಮೂಡಿದೆ. ಅಯ್ಯರ್‌ ಅವರು ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳಲ್ಲಿ ಆಡುವುದು ಒಳ್ಳೆಯದು ಈ ವೇಳೆ ಅವರ ಫಿಟ್‌ನೆಸ್‌ ಪರಿಶೀಲನೆ ಮಾಡಬಹುದು ಎಂದು ಆಯ್ಕೆ ಸಮಿತಿಯ ಚೇರ್ಮನ್‌ ಅಜಿತ್‌ ಅಗರ್ಕರ್‌ ಹೇಳಿದ್ದಾರೆ.

ಸೂರ್ಯಕುಮಾರ್‌ ಯಾದವ್‌, ಇಶನ್‌ ಕಿಶನ್‌ ಅವರು ಆಸ್ಟ್ರೇಲಿಯ ವಿರುದ್ಧ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಬಹುದು. ಕೆಎಲ್‌ ರಾಹುಲ್‌ ತಂಡವನ್ನು ಮುನ್ನಡೆಸಲಿದ್ದು ಅವರ ಜತೆ ಶುಭ್‌ಮನ್‌ ಗಿಲ್‌, ರುತುರಾಜ್‌ ಗಾಯಕ್ವಾಡ್‌ ಆಡುವ ಸಾಧ್ಯತೆಯಿದೆ. ಗಿಲ್‌ ಅವರ ಜತೆ ಇಶನ್‌ ಕಿಶನ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದ್ದು ಕೊಹ್ಲಿ ಜಾಗವನ್ನು ಶ್ರೇಯಸ್‌ ಅಯ್ಯರ್‌ ಆಕ್ರಮಿಸುವ ನಿರೀಕ್ಷೆಯಿದೆ. ಏಷ್ಯನ್‌ ಗೇಮ್ಸ್‌ ತಂಡದಲ್ಲಿರುವ ರುತುರಾಜ್‌ ಗಾಯಕ್ವಾಡ್‌ ಕೂಡ ತಂಡದಲ್ಲಿದ್ದಾರೆ.

Advertisement

ಅಕ್ಷರ್‌ ಪಟೇಲ್‌ ಗಾಯಗೊಂಡಿರುವ ಕಾರಣ ಆರ್‌. ಅಶ್ವಿ‌ನ್‌ ಈ ಸರಣಿಯ ಜತೆ ವಿಶ್ವಕಪ್‌ನಲ್ಲೂ ಆಡುವ ನಿರೀಕ್ಷೆಯಿದೆ. ಎರಡು ವಾರಗಳ ಹಿಂದೆ ಅಶ್ವಿ‌ನ್‌ ತಂಡ ವ್ಯವಸ್ಥಾಪಕರ ಕಣ್ಣಿನಿಂದ ದೂರ ಉಳಿದಿದ್ದರು. ಇದೀಗ ವಾಷಿಂಗ್ಟನ್‌ ಸುಂದರ್‌ ಅವರೊಂದಿಗೆ ತಂಡಕ್ಕೆ ಸೇರ್ಪಡೆಯಾಗುವ ಹಂತಕ್ಕೆ ತಲುಪಿದ್ದಾರೆ.

ಕುಲದೀಪ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವವರ ಅನುಪಸ್ಥಿತಿಯಲ್ಲಿ ಅಶ್ವಿ‌ನ್‌ ಮತ್ತು ವಾಷಿಂಗ್ಟನ್‌ ಅವರಿಗೆ ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಒಳ್ಳೆಯ ಅವಕಾಶ ಸಿಕ್ಕಿದೆ. ಅವರಿಬ್ಬರ ಜತೆ ವೇಗಿಗಳಾದ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಮತ್ತು ಶಮಿ ಎದುರಾಳಿಯನ್ನು ಕಟ್ಟಿಹಾಕಲು ಪ್ರಯತ್ನಿಸಬಹುದು.

ಆಸ್ಟ್ರೇಲಿಯ ಬಲಿಷ್ಠ
ಏಕದಿನ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯ ಭಾರತದ ನೆಲದಲ್ಲಿಯೂ ಶ್ರೇಷ್ಠ ನಿರ್ವಹಣೆ ನೀಡುತ್ತ ಬಂದಿದೆ. ಕಳೆದ ಮಾರ್ಚ್‌ನಲ್ಲಿ ಭಾರತದಲ್ಲಿ ನಡೆದ ಏಕದಿನ ಸರಣಿ ಗೆದ್ದಿರುವ ಆಸ್ಟ್ರೇಲಿಯ ತಂಡ ಮುಂಬರುವ ವಿಶ್ವಕಪ್‌ ಹಿನ್ನೆಲೆಯಲ್ಲಿ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆಯಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸರಣಿಯಲ್ಲಿ 2-3 ಅಂತರದಿಂದ ಸೋತರೂ ಆಸ್ಟ್ರೇಲಿಯ ತಂಡ ಬಲಿಷ್ಠವಾಗಿಯೇ ಇದೆ. ಆದರೆ ತಂಡದ ಕೆಲವು ಆಟಗಾರರು ಗಾಯದ ಸಮಸ್ಯೆಯಲ್ಲಿರುವುದು ನಾಯಕ ಪ್ಯಾಟ್‌ ಕಮಿನ್ಸ್‌ ಅವರಿಗೆ ಚಿಂತೆಯಾಗಿದೆ.
ಬೆರಳ ಗಾಯದಿಂದ ಚೇತರಿಸಿಕೊಂಡಿ ರುವ ಕಮಿನ್ಸ್‌ ಮೂರು ಪಂದ್ಯಗಳ ಸರಣಿಯಲ್ಲಿ ಆಡುವುದಾಗಿ ತಿಳಿಸಿದ್ದಾರೆ. ಗಾಯಗೊಂಡಿರುವ ಟ್ರ್ಯಾವಿಸ್‌ ಹೆಡ್‌ ಅವರ ಬದಲಿಗೆ ಮಾರ್ನಸ್‌ ಲಬುಶೇನ್‌ ಆಡುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next