ನವದೆಹಲಿ: ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸ ಸ್ಥಾನವಾಗಿ ಭಾರತ ಹೊರಹೊಮ್ಮಿದೆ. 2018ರ ಅಖೀಲ ಭಾರತ ಹುಲಿ ಗಣತಿ ವರದಿಯ ಪ್ರಕಾರ, ಭಾರತದಲ್ಲಿ ಪ್ರಸಕ್ತ 2,967 ಹುಲಿಗಳಿರುವುದು ಖಾತ್ರಿಯಾಗಿದೆ. 2006ರಲ್ಲಿ 1,411 ಹುಲಿಗಳಿದ್ದವು. ಈ ಹಿನ್ನೆಲೆಯಲ್ಲಿ, ಭಾರತವು ವಿಶ್ವದಲ್ಲೇ ಹುಲಿಗಳ ಪಾಲಿನ ಅತಿ ಸುರಕ್ಷಾ ವಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಗಣತಿಯನ್ನು 2018ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸ್ವಯಂ ಸೇವಕರ ತಂಡ ದೇಶದ 3,81,400 ಚದರ ಕಿಮೀ ಪ್ರದೇಶ ವ್ಯಾಪ್ತಿಯಲ್ಲಿ ನಡೆಸಿತ್ತು.
ಸಂಕಲ್ಪದಿಂದ ಸಿದ್ಧಿ-ಪ್ರಧಾನಿ ಮೆಚ್ಚುಗೆ : ನವದೆಹಲಿಯಲ್ಲಿ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ”ಒಂಭತ್ತು ವರ್ಷಗಳ ಹಿಂದೆ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದಿದ್ದ ವನ್ಯಜೀವಿ ಸಂರಕ್ಷಣೆ ಕುರಿತ ಸಮ್ಮೇಳನದಲ್ಲಿ ಎಲ್ಲಾ ರಾಷ್ಟ್ರಗಳಿಗೆ ತಮ್ಮಲ್ಲಿರುವ ಹುಲಿಯ ಸಂತತಿಯನ್ನು 2022ರೊಳಗೆ ದುಪ್ಪಟ್ಟು ಮಾಡಬೇಕೆಂದು ಕರೆ ನೀಡಲಾಗಿತ್ತು. ಭಾರತವು, ಆ ಗಡುವು ಮುಗಿಯಲು ಇನ್ನೂ ನಾಲ್ಕು ವರ್ಷ ಬಾಕಿ ಇರುವಂತೆಯೇ ಆ ಗುರಿಯನ್ನು ತಲುಪಿದೆ. ಸಂಕಲ್ಪದಿಂದ ಸಿದ್ಧಿಯಾಗುತ್ತದೆ ಎಂಬ ಮಾತಿಗೆ ಇದು ಸಾಕ್ಷಿ” ಎಂದರು.
‘ಟೈಗರ್ ಝಿಂದಾ ಹೈ’: ಹುಲಿ ಸಂತತಿಯ ಅಭಿವೃದ್ಧಿಯನ್ನು ಬಾಲಿವುಡ್‌ನ ಎರಡು ಸಿನಿಮಾಗಳ ಶೀರ್ಷಿಕೆಗಳ ಮೂಲಕ ವಿವರಿಸಿದ ಪ್ರಧಾನಿ ಮೋದಿ, ಹಿಂದೆ ‘ಏಕ್ ಥಾ ಟೈಗರ್’ ಎಂಬ ಮಾತು ಚಾಲ್ತಿಯಲ್ಲಿತ್ತು. ಈಗ ‘ಟೈಗರ್ ಝಿಂದಾ ಹೈ’ ಎಂಬುದು ಸಾಬೀತಾಗಿದೆ. ಆದರೆ, ಇದು ಇಲ್ಲಿಗೇ ನಿಲ್ಲಬಾರದು. ಹುಲಿಗಳ ಸಂರಕ್ಷಣೆ ಹಾಗೂ ಅವುಗಳ ಸಂತಾನಾಭಿವೃದ್ಧಿ ಒಂದು ಕೈಂಕರ್ಯವಾಗಿ ಮುಂದುವರಿಯಬೇಕು ಎಂದು ಹೇಳಿದರು.
ಸಂರಕ್ಷಿತ ವಲಯಗಳ ಹೆಚ್ಚಳ: 2014ರಲ್ಲಿ ಭಾರತದಲ್ಲಿನ ಹುಲಿಗಳ ಸಂರಕ್ಷಿತ ವಲಯಗಳ ಸಂಖ್ಯೆ 692ರಷ್ಟಿತ್ತು. 2019ರ ಹೊತ್ತಿಗೆ ಇವು 860ರಷ್ಟಿವೆ. ಹಾಗೆಯೇ, ಹುಲಿಗಳ ಮೀಸಲು ಕೇಂದ್ರಗಳ ಸಂಖ್ಯೆಯು 2014ರಲ್ಲಿ 43ರಷ್ಟಿದ್ದರೆ, ಈ ವರ್ಷ ಅವು 100ರಷ್ಟಿವೆ ಎಂದ ಮೋದಿ, ದೇಶದ ಎಲ್ಲಾ ಜನರಿಗೆ ಸೂರು ನೀಡುವುದು ನಮ್ಮ ಸರ್ಕಾರದ ಆಶಯವಾಗಿದ್ದು, ಅದೇ ರೀತಿ ವನ್ಯಜೀವಿಗಳ ಅಭಿವೃದ್ಧಿಗೂ ಸರ್ಕಾರ ಶ್ರಮಿಸಲಿದೆ ಎಂದರು.
ಪ್ರಸ್ತುತ ಭಾರತದಲ್ಲಿರುವ ಹುಲಿಗಳ ಸಂಖ್ಯೆ
2,967: 2006ರಲ್ಲಿ ಭಾರತದಲ್ಲಿದ್ದ ಹುಲಿಗಳು
1,411: ಮಧ್ಯಪ್ರದೇಶದಲ್ಲಿರುವ ಹುಲಿಗಳ ಸಂಖ್ಯೆ
526: ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ
524: ವರ್ಷ, ಹುಲಿಗಳ ಸಂಖ್ಯೆ
ರಾಜ್ಯಕ್ಕೆ 2ನೇ ಸ್ಥಾನ
ಮಧ್ಯಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಪ್ರಸ್ತುತ ಅಲ್ಲಿ 526 ಹುಲಿಗಳಿವೆ. 524 ಹುಲಿಗಳನ್ನು ಹೊಂದಿರುವ ಕರ್ನಾಟಕ, 2ನೇ ಸ್ಥಾನದಲ್ಲಿದೆ. ಆನಂತರದ ಸ್ಥಾನ ಉತ್ತರಾಖಂಡ (442) ರಾಜ್ಯದ್ದಾಗಿದೆ. 2014ರ ಗಣತಿ ಪ್ರಕಾರ ರಾಜ್ಯದಲ್ಲಿ 406 ಹುಲಿಗಳಿದ್ದವು. ಕಳೆದ 4 ವರ್ಷಗಳಲ್ಲಿ ಆ ಸಂಖ್ಯೆ 118 ಹೆಚ್ಚಾಗಿದೆ. ವಿಚಿತ್ರವೆಂದರೆ ಕಳೆದ ಎರಡೂ ಬಾರಿಯೂ ಕರ್ನಾಟಕವೇ ಮೊದಲ ಸ್ಥಾನದಲ್ಲಿತ್ತು.