Advertisement

ಭಾರತ ಗಡಿಗೆ ಇನ್ನು ನಾರೀ ರಕ್ಷೆ; 9 ಹೊಸ ಮುಖಗಳು

06:45 AM Sep 04, 2017 | Team Udayavani |

ಹೊಸದಿಲ್ಲಿ: ದೇಶಕ್ಕೀಗ “ನಿರ್ಮಲ ರಕ್ಷಣೆ’ಯ ನಾರೀ ಶಕ್ತಿ ದೊರೆತಿದೆ. ದೇಶದ ಅತಿ ಪ್ರಮುಖ ಹುದ್ದೆಗಳಲ್ಲಿ ಒಂದಾಗಿರುವ “ರಕ್ಷಣೆ’ಯ ಹೊಣೆಯು ಈಗ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್‌ ಅವರ ಹೆಗಲಿಗೆ ಬಿದ್ದಿದೆ. ಈ ಮೂಲಕ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ರಕ್ಷಣಾ ಸಚಿವೆಯಾಗಿ ನೇಮಕಗೊಂಡ ಮಹಿಳೆ ಎಂಬ ಹೆಗ್ಗಳಿಕೆಗೆ ನಿರ್ಮಲಾ ಪಾತ್ರರಾಗಿದ್ದಾರೆ.

Advertisement

ಇದು ಪ್ರಧಾನಿ ಮೋದಿ ಅವರ “ಮಾಸ್ಟರ್‌ ಸ್ಟ್ರೋಕ್‌’ಗೆ ಹೊಸ ಸೇರ್ಪಡೆ. ರವಿವಾರ ನಡೆದ ಕೇಂದ್ರ ಸಂಪುಟ ಪುನಾರಚನೆ ವೇಳೆ ವಾಣಿಜ್ಯ ಖಾತೆ ಸಹಾಯಕ ಸಚಿವೆಯಾಗಿದ್ದ ನಿರ್ಮಲಾ ಅವರನ್ನು ಸಂಪುಟ ದರ್ಜೆ ಸಚಿವೆ ಯಾಗಿ ಭಡ್ತಿ ನೀಡುವ, ಅದರಲ್ಲೂ ವಿಶೇಷವಾಗಿ ರಕ್ಷಣೆಯಂಥ ಗುರುತರ ಜವಾಬ್ದಾರಿಯನ್ನು ಅವರ ಹೆಗಲಿಗೇರಿಸುವ ಮೂಲಕ ಪ್ರಧಾನಿ ಮೋದಿ ಅವರು ಎಲ್ಲರ ಊಹಾಪೋಹಗಳನ್ನು ತಲೆಕೆಳಗಾಗಿಸಿದ್ದಾರೆ. ಜತೆಗೆ, ಮಹಿಳೆಯರೇನೂ ಮಹತ್ವದ ಹುದ್ದೆಗಳಿಗೆ ಅಸ್ಪೃಶ್ಯರಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಈ ಹಿಂದೆ 70ರ ದಶಕದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆಯನ್ನು ಹೊತ್ತಿದ್ದರು. ಅವರ ಅನಂತರ ರಕ್ಷಣೆಯ ಜವಾಬ್ದಾರಿ ಹೊತ್ತ 2ನೇ ಮಹಿಳೆ ಹಾಗೂ ಪೂರ್ಣ ಪ್ರಮಾಣದಲ್ಲಿ ಈ ಖಾತೆಯನ್ನು ನಿರ್ವಹಿಸುತ್ತಿರುವ ಮೊದಲ ಮಹಿಳೆ ಎಂಬ ಕೀರ್ತಿ ನಿರ್ಮಲಾ ಅವರಿಗೆ ದಕ್ಕಿದೆ. ಉತ್ತರ ಕನ್ನಡದ ಸಂಸದ ಅನಂತ ಕುಮಾರ್‌ ಹೆಗಡೆ ಅವರಿಗೆ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ನೀಡಲಾಗಿದೆ.

ನಾಲ್ವರಿಗೆ ಭಡ್ತಿ; 9 ಹೊಸ ಮುಖಗಳು: 2019ರ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ  ಸಂಪುಟ ಪುನಾರಚನೆ ಸಹಜವಾಗಿಯೇ ದೇಶವಾಸಿಗಳ ಕುತೂಹಲ ಕೆರಳಿಸಿತ್ತು. ರವಿವಾರ ಬೆಳಗ್ಗೆ 10 ಗಂಟೆಯವರೆಗೂ ಎಲ್ಲವೂ ಗುಪ್ತವಾಗಿಯೇ ಇತ್ತು. ರಾಷ್ಟ್ರಪತಿ ಭವನದಲ್ಲಿ  ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇನ್ನೇನು ಆರಂಭವಾಗಲಿದೆ ಎನ್ನುವಾಗಲೇ ಪುನಾರಚನೆಯ ಸ್ಪಷ್ಟ ಚಿತ್ರಣ ಮೂಡಿತು.

ಸಹಾಯಕ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್‌, ಪಿಯೂಷ್‌ ಗೋಯಲ್‌, ಧರ್ಮೇಂದ್ರ ಪ್ರಧಾನ್‌ ಹಾಗೂ ಮುಖಾ¤ರ್‌ ಅಬ್ಟಾಸ್‌ ನಕ್ವಿ ಅವರಿಗೆ ಸಂಪುಟ ದರ್ಜೆಗೆ ಭಡ್ತಿ ನೀಡಿದರೆ, ನಾಲ್ವರು ಮಾಜಿ ಅಧಿಕಾರಿಗಳ ಸಹಿತ 9 ಹೊಸ ಮುಖಗಳನ್ನು ಪ್ರಧಾನಿ ತನ್ನ ಸಂಪುಟಕ್ಕೆ ಸೇರಿಸಿದ್ದಾರೆ. ಈ 9 ಮಂದಿಗೆ ಸಹಾಯಕ ಸಚಿವ ಸ್ಥಾನಗಳನ್ನು ನೀಡಲಾಗಿದೆ. ಈ ಮೂಲಕ ಮೋದಿ ಸಂಪುಟದ ಸದಸ್ಯ ಬಲ 73ರಿಂದ 76ಕ್ಕೇರಿಕೆಯಾಗಿದೆ.

Advertisement

ಗೋಯಲ್‌ಗೆ ರೈಲ್ವೇ: ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಉತ್ತಮ ಟ್ರ್ಯಾಕ್‌ ರೆಕಾರ್ಡ್‌ ಹೊಂದಿರುವವರಿಗಷ್ಟೇ ಆದ್ಯತೆ ನೀಡಿರುವುದು ಸ್ಪಷ್ಟವಾಗುತ್ತದೆ. ವಿದ್ಯುತ್‌ ವಲಯದಲ್ಲಿನ ಸಾಧನೆಯಿಂದ ಮೆಚ್ಚುಗೆಗೆ ಪಾತ್ರವಾಗಿರುವ ಪಿಯೂಷ್‌ ಗೋಯಲ್‌ ಅವರಿಗೆ ಭಡ್ತಿ ನೀಡಿರುವ ಪ್ರಧಾನಿ ಮೋದಿ, ಗೋಯಲ್‌ ಅವರನ್ನು ರೈಲ್ವೇ ಸಚಿವರನ್ನಾಗಿ ನೇಮಿಸಿದ್ದಾರೆ. ಸರಣಿ ರೈಲು ದುರಂತಗಳಿಗೆ ನೈತಿಕ ಹೊಣೆ ಹೊತ್ತು ರೈಲ್ವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಸುರೇಶ್‌ ಪ್ರಭು ಅವರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೊಣೆ ವಹಿಸಿದ್ದಾರೆ.

ಗೋಯಲ್‌ ಅವರು ನಿರ್ವಹಿ ಸುತ್ತಿದ್ದ ಕ್ರೀಡಾ ಸಚಿವಾಲಯ ಇದೀಗ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರಿಗೆ ಸಿಕ್ಕಿದೆ. ಇನ್ನು ನಕ್ವಿ ಅವರಿಗೆ ಅಲ್ಪಸಂಖ್ಯಾಕ ವ್ಯವಹಾರ ಹಾಗೂ ಪ್ರಧಾನ್‌ ಅವರಿಗೆ ತೈಲ ಸಚಿವಾಲಯದ ಹೊಣೆ ಸಿಕ್ಕಿದೆ. ಜತೆಗೆ, ಕೌಶಲಾಭಿವೃದ್ಧಿ ಸಚಿವಾಲಯದ ಹೆಚ್ಚು ವರಿ ಜವಾಬ್ದಾರಿಯನ್ನೂ ಪ್ರಧಾನ್‌ಗೆ ವಹಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ಮೋದಿ ಮನ ಗೆದ್ದಿರುವ ಗಡ್ಕರಿ ಅವರಿಗೆ ಈವರೆಗೆ ಉಮಾಭಾರತಿ ಅವರು ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯದ ಹೊಣೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಉಮಾಭಾರತಿ ಅವರು ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯನ್ನು ನಿರ್ವಹಿಸಲಿದ್ದಾರೆ.

ಹೊಸ ಸಹಾಯಕ ಸಚಿವರು
ಅನಂತಕುಮಾರ್‌ ಹೆಗಡೆ- ಕೌಶಲಾಭಿವೃದ್ಧಿ ಮತ್ತು ಉದ್ಯಮ ಶೀಲತೆ, ವೀರೇಂದ್ರ ಕುಮಾರ್‌- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಲ್ಪಸಂಖ್ಯಾಕ ವ್ಯವಹಾರ, ಗಜೇಂದ್ರ ಸಿಂಗ್‌ ಶೇಖಾವತ್‌-ಕೃಷಿ ಮತ್ತು ರೈತರ ಕಲ್ಯಾಣ, ಆಲೊ#àನ್ಸ್‌ ಕನ್ನಂಥಾನಮ್‌- ಪ್ರವಾಸೋದ್ಯಮ; ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ, ಆರ್‌.ಕೆ.ಸಿಂಗ್‌- ವಿದ್ಯುತ್‌; ಹೊಸ ಮತ್ತು ನವೀಕರಿಸಬಹುದಾದ ಇಂಧನ, ಹರ್‌ದೀಪ್‌ ಪುರಿ- ಗೃಹ ಮತ್ತು ನಗರ, ಸತ್ಯಪಾಲ್‌ ಸಿಂಗ್‌-ಮಾನವ ಸಂಪನ್ಮೂಲ ಅಭಿವೃದ್ಧಿ; ಜಲ ಸಂಪನ್ಮೂಲ, ಗಂಗಾ ಪುನರುಜ್ಜೀವನ, ಅಶ್ವಿ‌ನಿ ಕುಮಾರ್‌ ಚೌಬೆ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿವಪ್ರತಾಪ್‌ ಶುಕ್ಲಾ- ಹಣಕಾಸು.

ನಿರ್ಮಲಾಗೆ ಎರಡು ಪ್ರಮೋಷನ್‌ 
ಸಂಪುಟ ಪುನಾರಚನೆ ಬಳಿಕ ಅತಿ ಹೆಚ್ಚು ಸುದ್ದಿಯಾಗಿದ್ದು, ನಿರ್ಮಲಾ ಸೀತಾರಾಮನ್‌ ಅವರಿಗೆ ಸಿಕ್ಕಿರುವ ರಕ್ಷಣಾ ಖಾತೆಯ ಹೊಣೆ. ಪ್ರಧಾನಿ ಮೋದಿ ಅವರು ಮಹತ್ವದ ಹುದ್ದೆಯೊಂದನ್ನು ಮಹಿಳೆಯೊಬ್ಬರಿಗೆ ನೀಡುತ್ತಾರೆ ಎಂದು ಸ್ವತಃ ನಿರ್ಮಲಾ ಅವರೂ ಊಹಿಸಿರಲಿಲ್ಲ. ಆದರೆ, ಪಕ್ಷದ ವಕ್ತಾರೆಯಾಗಿ, ವಾಣಿಜ್ಯ ಖಾತೆ ಸಹಾಯಕ ಸಚಿವೆಯಾಗಿ ನಿರ್ಮಲಾ ಅವರು ಮಾಡಿರುವ ಸಾಧನೆಯ ಮುಂದೆ ಉಳಿದೆಲ್ಲವೂ ಗೌಣ ಎಂಬುದನ್ನು ಪರಿಗಣಿಸಿದ ಮೋದಿ ಅವರು ರವಿವಾರ ನಿರ್ಮಲಾ ಅವರಿಗೆ ಎರಡು ಪ್ರಮೋಷನ್‌ಗಳನ್ನು ನೀಡಿದರು. ಮೊದಲನೆಯದ್ದು ಸಂಪುಟ ದರ್ಜೆಗೆ ಭಡ್ತಿ, ಮತ್ತೂಂದು ರಕ್ಷಣಾ ಖಾತೆ ಹಾಗೂ ಅದರ ಮೂಲಕ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ (ಸಿಸಿಎಸ್‌)ಯಲ್ಲಿ ಸ್ಥಾನ.

ಹೀಗಾಗಿ, ಪ್ರಭಾವಿಗಳೇ ತುಂಬಿರುವ ಸಿಸಿಎಸ್‌(ಪ್ರಧಾನಿ ಮೋದಿ, ಸಚಿವರಾದ ರಾಜನಾಥ್‌ಸಿಂಗ್‌, ಅರುಣ್‌ ಜೇಟಿÉ ಮತ್ತು ಸುಷ್ಮಾ ಸ್ವರಾಜ್‌) ನಲ್ಲಿ ಈಗ ನಿರ್ಮಲಾ ಅವರ ಸೇರ್ಪಡೆಯ ಮೂಲಕ ಇಬ್ಬರು ಮಹಿಳೆಯರು ಸ್ಥಾನ ಪಡೆದಂತಾಗಿದೆ. ನಿರ್ಮಲಾ ಅವರ ನೇಮಕವನ್ನು ಮಹಿಳಾ ಸಬಲೀಕರಣದ ದೃಷ್ಟಿಯ ಹೊರತಾಗಿ ನೋಡುವುದಾದರೆ, ಪ್ರಧಾನಿ ಮೋದಿ ಅವರು ವಾಣಿಜ್ಯ ಇಲಾಖೆಯಲ್ಲಿ ಸೀತಾರಾಮನ್‌ ಅವರ ಸಾಧನೆಯನ್ನು ಮೆಚ್ಚಿರುವುದು ಸ್ಪಷ್ಟವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜತೆಗೆ, ತಮಿಳುನಾಡು ರಾಜಕೀಯ ಪ್ರವೇಶಿಸಲು ಹವಣಿಸುತ್ತಿರುವ ಬಿಜೆಪಿ ಅಲ್ಲಿ ನಿರ್ಮಲಾ ಅವರ ವರ್ಚಸ್ಸನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲು ನಿರ್ಧರಿಸಿರುವುದರ ಭಾಗವಿದು ಎಂದೂ ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next