ನವದೆಹಲಿ/ಲಂಡನ್: ಪ್ರತಿದಿನವೂ ಭಾರತೀಯರ ಜೇಬು ಸುಡುತ್ತಿರುವ ತೈಲ ದರ, ಮುಂದಿನ ದಿನಗಳಲ್ಲಿ ಮತ್ತಷ್ಟು ಸುಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ ಇರಾನ್ ಮೇಲಿನ ದಿಗ್ಬಂಧನದಿಂದಾಗಿ ಭಾರತದಂಥ ಅಭಿವೃದ್ಧಿಶೀಲ ದೇಶಗಳ ಮಾರುಕಟ್ಟೆಗಳು ನಲುಗುತ್ತಿವೆ. ಇದೀಗ ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವೆ ಪತ್ರಕರ್ತರೊಬ್ಬರ ಸಾವಿನ ವೈಮನಸ್ಸು ತೈಲ ದರದ ಮೇಲೂ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳನ್ನು ಸೃಷ್ಟಿಸಿದೆ.
ಒಂದು ವೇಳೆ ಸೌದಿ ಅರೇಬಿಯಾ ವಿರುದ್ಧ ಟ್ರಂಪ್ ದಿಗ್ಬಂಧನದಂಥ ಕ್ರಮಕ್ಕೆ ಮುಂದಾದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 100, 200 ಡಾಲರ್ ಅಥವಾ ಇದರ ದುಪ್ಪಟ್ಟು ಆಗಬಹುದು ಎಂದು ಸೌದಿ ಅರೆಬಿಯಾದ ಸುದ್ದಿವಾಹಿನಿ ಅಲ್ ಅರೇಬಿಯಾ ವರದಿ ಮಾಡಿದೆ.
ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿ ಅಮೆರಿಕ ವಾಸಿ, ಸೌದಿ ರಾಜಮನೆತನದ ಟೀಕಾಕಾರ ಜಮಲ್ ಕಶೋಗ್ಗಿ ನಾಪತ್ತೆಯಾಗಿದ್ದು, ಇವರ ಹತ್ಯೆಯಾಗಿದೆ ಎಂದು ಟರ್ಕಿ ಹೇಳಿದೆ. ಅಲ್ಲದೆ ಹತ್ಯೆಯ ಹಿಂದೆ ಸೌದಿ ಅರೇಬಿಯಾ ಇರಬಹುದು ಎಂದು ಅದು ಶಂಕೆ ವ್ಯಕ್ತಪಡಿಸಿದೆ. ಸೌದಿ ಅರೇಬಿಯಾದವರೇ ಜಮಲ್‌ರನ್ನು ಹತ್ಯೆ ಮಾಡಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಟ್ರಂಪ್ ಹೇಳಿದ್ದು, ಇದು ಸೌದಿ ರಾಜಮನೆತನಕ್ಕೆ ಸಿಟ್ಟು ಬರಲು ಕಾರಣವಾಗಿದೆ. ಅಮೆರಿಕ ಅಥವಾ ಪಾಶ್ಚಿಮಾತ್ಯ ದೇಶಗಳು ಸೌದಿ ವಿರುದ್ಧ ನಿಂತರೆ, “ತೈಲ’ವನ್ನೇ “ಆಯುಧ’ವನ್ನಾಗಿ ಮಾಡಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆಣೆಸಲೂ ಸೌದಿ ಅರೇಬಿಯಾ ನಿರ್ಧರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿಶೇಷವೆಂದರೆ ದಶಕಗಳ ಹಿಂದೆಯೇ ಸೌದಿ ಅರೇಬಿಯಾ ತೈಲವನ್ನು ಆಯುಧವನ್ನಾಗಿ ಬಳಸಿಕೊಳ್ಳುವ ನಿಯಮದಿಂದ ಹಿಂದೆ ಸರಿದಿತ್ತು. ಅಲ್ಲದೆ ಸೌದಿ ಈ ಕ್ರಮ ಜಾಗತಿಕ ಆರ್ಥಿಕ ಮಾರುಕಟ್ಟೆಯ ಸಂಪೂರ್ಣ ಕುಸಿತಕ್ಕೂ ಕಾರಣವಾಗಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗುವ ಸಾಧ್ಯತೆಗಳೂ ಇಲ್ಲದಿಲ್ಲ ಎಂದೂ ಹೇಳಲಾಗುತ್ತಿದೆ.
ಮತ್ತೆ ಏರಿಕೆಯ ಸ್ಥಿತಿಗೆ ಡೀಸೆಲ್ ದರ: ಹತ್ತು ದಿನಗಳ ಹಿಂದಷ್ಟೆ ತೈಲ ದರದಲ್ಲಿ 2.50 ರೂ. ಇಳಿಕೆ ಮಾಡಿದ್ದ ಕೇಂದ್ರ ಸರ್ಕಾರ ಗ್ರಾಹಕರಿಗೆ ಸ್ವಲ್ಪ ಮಟ್ಟಿನ ಸಮಾಧಾನ ನೀಡಿತ್ತು. ಆದರೆ, ಈ 10 ದಿನಗಳಲ್ಲಿ ಪ್ರತಿದಿನವೂ ತೈಲ ದರ ಏರಿಕೆಯಾಗಿದ್ದು, ಮತ್ತೆ ಹಳೆಯ ದರಕ್ಕೇ ಬಂದು ತಲುಪಿದೆ. ಈ ಮೂಲಕ ತೈಲ ದರ ಇಳಿಕೆ ಮಾಡಿದ್ದ ಕೇಂದ್ರ ಸರ್ಕಾರದ ಸಮಾಧಾನ 10 ದಿನಗಳಿಗೇ ಅಂತ್ಯವಾಗಿದೆ. ಅಂದರೆ, ಸೋಮವಾರ ಡೀಸೆಲ್ ದರವಷ್ಟೇ ಏರಿಕೆಯಾಗಿದ್ದು, 10 ದಿನಗಳಲ್ಲಿ 2.50 ರೂ. ಹೆಚ್ಚಿದಂತಾಗಿದೆ. ಆದರೆ, ಪೆಟ್ರೋಲ್ ದರ ಇನ್ನೂ ಅಷ್ಟಕ್ಕೆ ತಲುಪಿಲ್ಲ.
ಅಂದರೆ, ಅ. 4 ರಂದು ಕೇಂದ್ರ ಸರ್ಕಾರ ದರ ಇಳಿಕೆ ಮಾಡಿದ್ದು, 5 ರಿಂದ ಪರಿಷ್ಕೃತ ದರ ಜಾರಿಯಾಗಿತ್ತು. ಆಗ ಬೆಂಗಳೂರಿನಲ್ಲಿ ಡೀಸೆಲ್ ದರ 73.32 ರೂ. ಗಳಾಗಿತ್ತು. ಅ.15ಕ್ಕೆ ಡೀಸೆಲ್ ದರ 75.85 ರೂ.ಗಳಾಗಿವೆ. ಇನ್ನು ಪೆಟ್ರೋಲ್ ದರ ಅ.5 ರಂದು 82.14 ರೂ. ಗಳಿತ್ತು. ಅ.15ಕ್ಕೆ 83.37 ರೂ.ಗಳಾಗಿವೆ. ಅಲ್ಲಿಗೆ ಒಂದೂವರೆ ರೂಪಾಯಿಯಷ್ಟು ಹೆಚ್ಚಾಗಿದೆ.
ರೂಪಾಯಿಯಲ್ಲೇ ವಹಿವಾಟು ಮಾಡಿ
“ಖರೀದಿದಾರರು ಎಂದಿಗೂ ಬಂಗಾರದ ಮೊಟ್ಟೆಗಳು, ಅವರನ್ನು ಕಳೆದುಕೊಳ್ಳಬೇಡಿ…’ ಇದು ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ 40 ತೈಲ ಉತ್ಪಾದನೆ ರಾಷ್ಟ್ರಗಳಿಗೆ ಹೇಳಿದ ಕಿವಿಮಾತು. ಭಾರತದಲ್ಲಿ ದಿನದಿಂದ ದಿನಕ್ಕೆ ತೈಲ ದರ ಹೆಚ್ಚಳವಾಗುತ್ತಲೇ ಇದ್ದು, ಆರ್ಥಿಕತೆ ಮೇಲೆಯೂ ಅಡ್ಡಪರಿಣಾಮ ಬೀರುತ್ತಿದೆ. ಹೀಗಾಗಿ, “ಪಾವತಿ ವ್ಯವಸ್ಥೆಯನ್ನು ಪುನರ್‌ಪರಿಶೀಲನೆ’ ಮಾಡಿ ಎಂದು ಈ ತೈಲೋತ್ಪಾದನೆ ದೇಶಗಳಿಗೆ ಕರೆ ನೀಡಿದ್ದಾರೆ. ಈ ಮೂಲಕ ಸ್ಥಳೀಯ ಕರೆನ್ಸಿಯಲ್ಲೇ ವಹಿವಾಟು ನಡೆಸಲು ಒತ್ತಾಯಿಸಿದ್ದಾರೆ. ನವದೆಹಲಿಯಲ್ಲಿ ಸೋಮವಾರ ನಡೆದ ತೈಲೋತ್ಪಾದನೆ ದೇಶಗಳ 3ನೇ ವಾರ್ಷಿಕ ಸಭೆಯಲ್ಲಿ ಭಾರತವೂ ಸೇರಿದಂತೆ ಅಭಿವೃದ್ಧಿಹೊಂದುತ್ತಿರುವ ದೇಶಗಳು ತೈಲ ದರದ ಹೆಚ್ಚಳದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಖರೀದಿದಾರರು ಮತ್ತು ಉತ್ಪಾದಕರ ನಡುವೆ ನೇರ ಸಂಬಂಧವಿರಬೇಕು ಎಂದು ಪ್ರತಿಪಾದಿಸಿದರು. ಜತೆಗೆ ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿ ಮಾಡಿದರೂ ಹೂಡಿಕೆಗೆ ಏಕೆ ಬರುತ್ತಿಲ್ಲ ಎಂದೂ ಪ್ರಶ್ನಿಸಿದರು. ಸದ್ಯ ಡಾಲರ್ ಎದಿರು ರೂಪಾಯಿ ಮೌಲ್ಯ ಕುಸಿಯುತ್ತಿದ್ದು, ತೈಲ ವಹಿವಾಟು ವೇಳೆಯಲ್ಲಿನ ಪಾವತಿ ವ್ಯವಸ್ಥೆಯನ್ನು ಪುನರ್‌ಪರಿಶೀಲನೆ ಮಾಡಿ. ಇದರಿಂದ ರೂಪಾಯಿಗೆ ತಾತ್ಕಾಲಿಕವಾಗಿ ಬಲ ಸಿಗಬಹುದು ಎಂದೂ ಹೇಳಿದರು. ಅಂದರೆ, ಭಾರತ ಹಿಂದಿನಿಂದಲೂ ಪ್ರತಿಪಾದಿಸುತ್ತಿರುವ ರೂಪಾಯಿ ಅಥವಾ ಸ್ಥಳೀಯ ಕರೆನ್ಸಿ ಮೂಲಕವೇ ವಹಿವಾಟು ಮಾಡುವಂತೆ ಆಗ್ರಹಿಸಿದರು.
ಮುಂದಿನ ತಿಂಗಳಿಂದ ಪ್ರತಿ ದಿನ 1.7 ಕೋಟಿ ಬ್ಯಾರಲ್‌ಗಳಷ್ಟು ಕಚ್ಚಾ ತೈಲ ಹೆಚ್ಚುವರಿಯಾಗಿ ಉತ್ಪಾದಿಸಲಿದ್ದೇವೆ. ಭಾರತ ತೈಲ ಅಗತ್ಯವನ್ನು ಮನಗಂಡು, ಹೆಚ್ಚುವರಿ ತೈಲ ಪೂರೈಕೆ ಮಾಡಲಿದ್ದೇವೆ.
ಖಾಲಿದ್ ಅಲ್-ಫಾದಿಯಾ, ಸೌದಿ ಅರೇಬಿಯಾ ತೈಲ ಸಚಿವ