Advertisement
ನೆರೆ ರಾಷ್ಟ್ರ ನೇಪಾಳ ನಿಧಾನವಾಗಿ ಚೀನಾದ ವರ್ತುಲದತ್ತ ಸಾಗುತ್ತಿದೆ. ಈ ವಿದ್ಯಮಾನ ಭಾರತಕ್ಕೆ ಅನೇಕ ಆಯಾಮಗಳಲ್ಲಿ ಕೆಟ್ಟ ಸುದ್ದಿಯೇ ಹೌದು. ಅದರಲ್ಲೂ ಭಾರತವನ್ನು ಕಳವಳಕ್ಕೆ ದೂಡುತ್ತಿರುವ ಪ್ರಮುಖ ಸಂಗತಿಯೆಂದರೆ, ಭಾರತವನ್ನು ಬಿಟ್ಟು ಓಡಿಹೋದ ಉಗ್ರರಿಗೆ ಅಥವಾ ಭಾರತಕ್ಕೆ ನುಗ್ಗಿ ದಾಳಿ ನಡೆಸಲು ಕಾಯುತ್ತಿರುವ ಇಸ್ಲಾಮಿಕ್ ಭಯೋತ್ಪಾದಕರಿಗೆ ನೇಪಾಳ ಸುರಕ್ಷಿತ ತಾಣವಾಗಿ ಬದಲಾಗುತ್ತಿದೆ ಎನ್ನುವುದು.
Related Articles
Advertisement
ಚೀನಾದೊಂದಿಗಿನ ತನ್ನ ನಂಟನ್ನು ಬಲಿಷ್ಠಪಡಿಸಿಕೊಂಡಿದೆ ನೇಪಾಳ. ವಿವಾದಾತ್ಮಕ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯ ಭಾಗವಾಗಿ ನೇಪಾಳದಲ್ಲಿ ಇನ್ಮುಂದೆ ಮೂಲಸೌಕರ್ಯ ಮತ್ತು ವಿದ್ಯುತ್ ಯೋಜನೆಯಲ್ಲಿ ಹೂಡಿಕೆ ಮಾಡಲಿದೆ ಚೀನಾ. ಅತ್ತ ಚೀನಾದೊಂದಿಗೆ ಹತ್ತಿರವಾಗುತ್ತಾ ಇತ್ತ ಭಾರತವನ್ನು ಕಡೆಗಣಿಸಲಾರಂಭಿಸಿದೆ ನೇಪಾಳ. ಈ ತಿಂಗಳ ಆರಂಭದಲ್ಲಿ ನಡೆಯಬೇಕಿದ್ದ ಆಐMಖಖಉಇ ಮಿಲಿಟರಿ ವ್ಯಾಯಾಮದಿಂದ ಕಡೆಯ ಕ್ಷಣದಲ್ಲಿ ಅದು ಹಿಂದೆ ಸರಿದಿರುವುದು ಇದಕ್ಕೆ ಮತ್ತೂಂದು ಉದಾಹರಣೆ.
ಎಲ್ಲಕ್ಕಿಂತಲೂ ಭಾರತ ಸರ್ಕಾರಕ್ಕೆ ಅಚ್ಚರಿ ಮೂಡಿಸುತ್ತಿರುವ ಸಂಗತಿಯೆಂದರೆ, ಭಾರತ ವಿರೋಧಿ ವ್ಯಕ್ತಿಗಳೆಡೆಗಿನ ತನ್ನ ಹಳೆಯ ನೀತಿಯಲ್ಲಿ ನೇಪಾಳ ಸಂಪೂರ್ಣವಾಗಿ ಯೂಟರ್ನ್ ಹೊಡೆದಿರುವುದು. ಹಿಂದೆಲ್ಲ ಅದು ತನ್ನ ದೇಶದೊಳಕ್ಕೆ ನುಸುಳುವ ಭಾರತ ವಿರೋಧಿ ವ್ಯಕ್ತಿಗಳನ್ನು ಒಂದೋ ದೇಶದಿಂದ ಹೊರಕ್ಕೋಡಿಸುತ್ತಿತ್ತು, ಇಲ್ಲವೇ ಭಾರತಕ್ಕೆ ಹಸ್ತಾಂತರಿಸುತ್ತಿತ್ತು. (ಆದಾಗ್ಯೂ ಖುರ್ಷಿದ್ ಆಲಂಗೆ ಆಗಿನ ಕಮ್ಯುನಿಸ್ಟ್ ಸರ್ಕಾರ ಭದ್ರ ನೆಲೆ ಒದಗಿಸಿತು ಮತ್ತು ತದನಂತರ ಬಂದ ಸರ್ಕಾರಗಳೂ ಆತನನ್ನು ಭಾರತಕ್ಕೆ ಒಪ್ಪಿಸಲಿಲ್ಲ ಎನ್ನುವುದು ನಿಜವೇ ಆದರೂ ನಂತರದ ಸರ್ಕಾರಗಳು ಭಾರತದ ಕಳವಳದ ಬಗ್ಗೆ ಸಂವೇದನೆಯನ್ನಂತೂ ತೋರಿಸುತ್ತಿದ್ದವು.) ಆದರೆ, ನಮ್ಮ ಗುಪ್ತಚರ ಏಜೆನ್ಸಿಗಳ ಪ್ರಕಾರ, ನೇಪಾಳದ ನೀತಿ ಬದಲಾವಣೆಯಿಂದಾಗಿ ಈಗ ಭಾರತ ಮೂಲದ ಇಸ್ಲಾಮಿಕ್ ಉಗ್ರರಷ್ಟೇ ಅಲ್ಲ, ಪಾಕಿಸ್ತಾನ ಪೋಷಿತ ಉಗ್ರರೂ ನೇಪಾಳದಲ್ಲಿ ನಿಧಾನಕ್ಕೆ ನೆಲೆ ಕಂಡುಕೊಳ್ಳುತ್ತಿದ್ದಾರೆ.
ಇದೆಲ್ಲವೂ ಚೀನಾದ ಅಣತಿಯಂತೆ ಆಗುತ್ತಿದೆ ಎನ್ನುತ್ತಾರೆ ಹಿರಿಯ ಗುಪ್ತಚರ ಅಧಿಕಾರಿಗಳು. “”ನೇಪಾಳ ಕೂಡ ಪಾಕಿಸ್ತಾನದಂತೆಯೇ ಭಾರತ ವಿರೋಧಿ ರಾಷ್ಟ್ರವಾಗಿ ಬದಲಾಗಲಿ ಎಂದು ಚೀನಾ ಬಯಸುತ್ತದೆ. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಭಾರೀ ಭದ್ರತೆಯಿದ್ದು ಈಗ ಪಾಕಿಸ್ತಾನದ ಉಗ್ರರಿಗೆ ಭಾರತದೊಳಕ್ಕೆ ನುಸುಳುವುದು ಬಹಳ ಕಷ್ಟವಾಗುತ್ತಿದೆ. ಆದರೆ, ಇತ್ತ 1758 ಕಿಲೋಮೀಟರ್ ಉದ್ದರ ಭಾರತ-ನೇಪಾಳ ಗಡಿಯಲ್ಲಿ ಹೆಚ್ಚು ಭದ್ರತೆಯೇ ಇಲ್ಲ. ಹೀಗಾಗಿ ಉಗ್ರರು ಮತ್ತು ಭಾರತ ವಿರೋಧಿ ಶಕ್ತಿಗಳಿಗೆ ನೇಪಾಳದ ಮೂಲಕ ಭಾರತಕ್ಕೆ ನುಸುಳಿ ಮತ್ತೆ ನೇಪಾಳಕ್ಕೆ ಹಿಂದಿರುಗುವುದಕ್ಕೆ ಸುಲಭವಾಗುತ್ತದೆ” ಎನ್ನುತ್ತಾರೆ ಭಾರತದ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ಕಳೆದ ಕೆಲವು ವರ್ಷಗಳಿಂದ ಅಮೆರಿಕ ಮತ್ತು ಇತರೆ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಪಾಕಿಸ್ತಾನದ ಮೇಲೆ ಹದ್ದಿನ ಕಣ್ಣಿಟ್ಟಿವೆ. ಉಗ್ರ ಸಂಘಟನೆಗಳು ಮತ್ತು ಉಗ್ರರ ಬೆಳವಣಿಗೆಯಲ್ಲಿ ಪಾಕಿಸ್ತಾನದ ಪಾತ್ರದ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಈಗ ತನ್ನ “ಗ್ರಾಹಕ ದೇಶ’ ಪಾಕಿಸ್ತಾನವನ್ನು ರಕ್ಷಿಸುವುದಕ್ಕಾಗಿ ಚೀನಾ, ಪಾಕಿಸ್ತಾನಿ ಸೇನೆಯಿಂದ ತರಬೇತಿ ಪಡೆದ ಉಗ್ರರನ್ನು ಒಳಬಿಟ್ಟುಕೊಳ್ಳಲು ನೇಪಾಳಕ್ಕೆ ಒತ್ತಡ ಹೇರುತ್ತಿದೆ. ಟಿಬೆಟ್ ಸ್ವಾಯತ್ತ ಪ್ರದೇಶದ(ಟಿಎಆರ್) ಮೂಲಕ ಅನೇಕ ಉಗ್ರರು ಈಗಾಗಲೇ ನೇಪಾಳವನ್ನು ಪ್ರವೇಶಿಸಿದ್ದಾರೆ ಎನ್ನುತ್ತವೆ ಗುಪ್ತಚರ ವರದಿಗಳು.
ಈ ಉಗ್ರ ಸಂಘಟನೆಗಳು ನೇಪಾಳದಲ್ಲಿ ಕುಳಿತು ಭಾರತ ವಿರುದ್ಧದ ದಾಳಿಗೆ ತಂತ್ರ ಹೆಣೆಯುತ್ತಿವೆ. ಪಾಕಿಸ್ತಾನ ಮೊದಲಿನಿಂದಲೂ ನೇಪಾಳದಲ್ಲಿ ಸಕ್ರಿಯವಾಗಿದ್ದು ಇಲ್ಲಿಯವರೆಗೂ ಭಾರತದ ಗುಪ್ತಚರ ಇಲಾಖೆ, ನೇಪಾಳಿ ಅಧಿಕಾರ ವರ್ಗದ ಸಹಭಾಗಿತ್ವದಲ್ಲಿ ಈ ಉಗ್ರ ಘಟಕಗಳನ್ನು ಛಿದ್ರಗೊಳಿಸುತ್ತಿತ್ತು. “ಆದರೆ ಕೆಲವು ತಿಂಗಳಿಂದ ಪಾಕಿಸ್ತಾನದ ಐಎಸ್‌ಐ ನೇಪಾಳದಲ್ಲಿ ಬಹಳ ಸಕ್ರಿಯವಾಗಿದ್ದು, ಮೊದಲಿನಂತೆ ಆ ದೇಶದ ಗುಪ್ತಚರ ಇಲಾಖೆಗಳಿಂದ ನಮಗೆ ಮಾಹಿತಿ ಸಿಗುತ್ತಿಲ್ಲ. ನೇಪಾಳ ಸರ್ಕಾರವೂ ನಮಗೆ ಸಹಯೋಗ ನೀಡುತ್ತಿಲ್ಲ’ ಎನ್ನುತ್ತಾರೆ ರಿಸರ್ಚ್ ಆ್ಯಂಡ್ ಅನಲೈಸಿಸ್ ವಿಂಗ್(ರಾ)ನ ಅಧಿಕಾರಿಯೊಬ್ಬರು.
ನೇಪಾಳದಲ್ಲಿ ಪಾಕಿಸ್ತಾನದ ಹೆಜ್ಜೆಗುರುತುಗಳು ಸ್ಪಷ್ಟವಾಗುತ್ತಿರುವುದಕ್ಕೆ ಪುರಾವೆಯೆಂದರೆ, ನೂತನ ಕಮ್ಯುನಿಸ್ಟ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತೀಯರಿಗೆ ಸಂಬಂಧಿಸಿದ ನೆಲೆಗಳ ಮೇಲೆ ಎರಡು ಚಿಕ್ಕ ಬಾಂಬ್ ದಾಳಿಗಳು ನಡೆದಿರುವುದು. “”ಕಾಠ್ಮಂಡುವಿನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯಲ್ಲಿ ಐಎಸ್‌ಐ ಅಧಿಕಾರಿಗಳೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಅಲ್ಲದೇ ಇವರು ನೇಪಾಳದಲ್ಲಿನ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ನಿರಂತರವಾಗಿ ಭೇಟಿ ಕೊಡುತ್ತಿದ್ದಾರೆ” ಎನ್ನುತ್ತಾರೆ ಈ ಅಧಿಕಾರಿ.
ಭಾರತವನ್ನು ಎಲ್ಲಾ ಕಡೆಯಿಂದಲೂ ಸುತ್ತುವರಿದು ತಲೆನೋವು ಹೆಚ್ಚಿಸಬೇಕು ಎನ್ನುವುದು ಚೀನಾದ ಉದ್ದೇಶ. ಭಾರತವೀಗ ಹೆಚ್ಚು ಸಂಪನ್ಮೂಲವನ್ನು ಮತ್ತು ಗಮನವನ್ನು ನೇಪಾಳದತ್ತ ಹರಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದೆ. ಅದರಲ್ಲೂ ಇಂಡೋ-ನೇಪಾಳ ಗಡಿಯ ಅಪಾರ ವಿಸ್ತೀರ್ಣವನ್ನು ಗಮನಿಸಿದಾಗ, ನಿರಂತರವಾಗಿ ಈ ಭಾಗದ ಮೇಲೆ ಕಣ್ಗಾವಲಿಡುವುದು, ಹೆಚ್ಚು ಸೈನಿಕರನ್ನು ನಿಯೋಜಿಸುವುದು, ನೇಪಾಳದಲ್ಲಿ ನೆಲೆಯೂರಿರುವ ಉಗ್ರರ ಸಂಚುಗಳನ್ನು ತಪ್ಪಿಸುವುದು ಭಾರತಕ್ಕೆ ಕಷ್ಟವಾಗಲಿದೆ.
ಕೃಪೆ: ಸ್ವರಾಜ್ಯ
– ಜೈದೀಪ್ ಮಜುಂದಾರ್