ಧಾರವಾಡ: ಭಾರತೀಯ ಸಂಸ್ಕೃತಿ ಪ್ರಕಾರ ಈ ನಾಡಿನಲ್ಲಿ ಜನಿಸಿದ ಪ್ರತಿಯೊಬ್ಬ ಮನುಷ್ಯನು ತನ್ನ ಹೆತ್ತ ತಾಯಿಯನ್ನು ಎಷ್ಟು ಗೌರವಿಸುತ್ತಾನೋ ಅದರಷ್ಟೆ ಭಾರತ ಮಾತೆಯನ್ನೂ ಗೌರವಿಸಿ ಪೂಜಿಸಬೇಕು ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಇಲ್ಲಿಯ ಚರಂತಿಮಠ ಗಾರ್ಡನ್‌ದಲ್ಲಿರುವ ಶ್ರೀ ಬನಶಂಕರಿ ಭವನದಲ್ಲಿ ಆಯೋಜಿಸಿದ್ದ ಭಾರತ ಮಾತಾ ಪೂಜೆ ಸಮಾರಂಭದಲ್ಲಿ ಭಾರತ ಮಾತೆ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು. ಈ ನೆಲದ ಮೇಲೆ ಜನಿಸಿದ ಪ್ರತಿಯೊಬ್ಬರು ಭಾರತ ಮಾತೆಯ ಋಣದಲ್ಲಿದ್ದೇವೆ.
ಆಹಾರ, ನೀರು, ಗಾಳಿ ಸೇರಿದಂತೆ ಮನುಷ್ಯನಿಗೆ ಬದುಕಲು ಅನುಕೂಲ ಮಾಡಿಕೊಟ್ಟು ತನ್ನ ಕಷ್ಟಗಳ ಮಧ್ಯೆಯೂ ಜನರಿಗೆ ಸುಖ ನೀಡುತ್ತಿದ್ದಾಳೆ. ಮಾತೆಗೆ ಸಹನಾ ಶಕ್ತಿ ಜಾಸ್ತಿ ಇರುತ್ತದೆ. ಹೀಗಾಗಿ ಭೂಮಿಯನ್ನು ತಾಯಿಗೆ ಹೋಲಿಕೆ ಮಾಡಲಾಗುತ್ತಿದ್ದು, ಅಂತಹ ಮಾತೆಯನ್ನು ನಿತ್ಯ ನೆನೆಯಬೇಕು ಎಂದರು.
ಮೇಯರ್ ಡಿ.ಕೆ. ಚವ್ಹಾಣ ಮಾತನಾಡಿ, ಮಾನವರು ಇತ್ತೀಚೆಗೆ ಭೂಮಿ ತಾಯಿಗೆ ಹೆಚ್ಚು ಕಷ್ಟ ನೀಡುತ್ತಿದ್ದಾರೆ ಎನಿಸುತ್ತಿದೆ. ಸಸಿಗಳನ್ನು ನೆಡುವ ಬದಲಾಗಿ ಮರಗಳನ್ನು ಹೆಚ್ಚು ಕಡಿಯಲಾಗುತ್ತಿದೆ. ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದರೂ ಅನೇಕ ಕಾರಣದಿಂದ ಪರಿಸರ ನಾಶದತ್ತ ಸಾಗುತ್ತಿದೆ ಎಂದರು.
ಮಳೆ-ಬೆಳೆಗಾಗಿ ಇಂದು ನಾವು ಭೂತಾಯಿಗೆ ಮೊರೆ ಹೋಗುತ್ತಿದ್ದು, ಸಕಾಲದಲ್ಲಿ ಮಳೆ-ಬೆಳೆ ನೀರು ದೊರಕುವಂತೆ ಮಾಡಲು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ. ಭಾರತ ಮಾತೆಯನ್ನು ಪೂಜಿಸುವುದರ ಜೊತೆಗೆ ನಮ್ಮಲ್ಲಿರುವ ಮೌಲ್ಯಗಳನ್ನು ಅನುಷ್ಠಾನಗೊಳಿಸಿಕೊಳ್ಳಬೇಕು ಎಂದರು.
ಪಾಲಿಕೆ ಸದಸ್ಯ ಶಂಕರ ಶೇಳಕೆ, ನಿರ್ಮಲ ಜವಳಿ, ಮಾಜಿ ಶಾಸಕಿ ಸೀಮಾ ಮಸೂತಿ, ಭಾರತಿ ಮಗದುಮ್, ನಾಗೇಶರಾವ ಕಲಬುರ್ಗಿ, ಶಿವಾನಂದ ಲೋಲೆನವರ, ವೀರೇಶ ಅಂಚಟಗೇರಿ, ಈರಣ್ಣ ಹಪ್ಪಳಿ, ಮೋಹನ ರಾಮದುರ್ಗ, ಗೀತಾ ನವಲೆ ಇದ್ದರು. ರಾಘವೇಂದ್ರ ಸ್ವಾಗತಿಸಿದರು. ರವಿಕುಮಾರ ನಿರೂಪಿಸಿದರು. ಮಂಜುನಾಥ ವಂದಿಸಿದರು.