ಸೇಡಂ: ಇಂದು ಜಗತ್ತು ನಮ್ಮ ದೇಶದತ್ತ ನೋಡುತ್ತಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆದನಂತರ ತಂತ್ರಜ್ಞಾನ ಬಳಕೆಯಲ್ಲಿ ಭಾರತ ಹೊಸ ಮೈಲಿಗಲ್ಲು ಸಾಧಿಸುತ್ತಾ ಸಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.
ಪಟ್ಟಣದ ಕಂಪ್ಯೂಸಸ್ ಪಾಯಿಂಟ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರಿಕ್ಷಾ ಮಂಡಳಿ ಆಯೋಜಿಸುವ ಆಫೀಸ್ ಆಟೋಮೇಷನ್ ಕೋರ್ಸ್‌ನ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಲಿತ ಶಿಕ್ಷಣ ಮತ್ತು ಪಡೆದ ಜ್ಞಾನವನ್ನು ದೇಶ ಕಟ್ಟಲು ಸದ್ಬಳಕೆ ಮಾಡಿಕೊಳ್ಳಬೇಕು. ಮುಂದುವರೆಯು ತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳು ಅನೇಕ ವಿಷಯಗಳು ಕಲಿಯುವುದು ಅಗತ್ಯವಾಗಿದೆ. ಜಗತ್ತಿನ ಅತ್ಯಾಧುನಿಕ ಮತ್ತು ಹೊಸ ಆವಿಷ್ಕಾರಗ ಳನ್ನು ಕಂಡುಹಿಡಿಯುವ ವಿದ್ಯಾರ್ಥಿಗಳು ನೀವಾಗಬೇಕು ಎಂದು ತಿಳಿಸಿದರು.
ಡಿವೈಎಸ್ಪಿ ಬಸವರಾಜ ಕೆ.ಮಾತನಾಡಿ, ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಜ್ಞಾನದ ಅವಶ್ಯಕತೆ ಅಗತ್ಯವಾಗಿದೆ. ಪ್ರತಿ ವಿದ್ಯಾರ್ಥಿ ಕಂಪ್ಯೂಟರ್ ತರಬೇತಿ ಪಡೆಯಬೇಕು ಎಂದರು.
ಕಂಪ್ಯೂಸಸ್ ಪಾಯಿಂಟ್ ನಿರ್ದೇಶಕರು ದತ್ತಾತ್ರೇಯ ಐನಾಪೂರ ಮಾತನಾಡಿದರು. ಸಿಪಿಐ ಆನಂದರಾವ ಎಸ್.ಎನ್. ಪಿಎಸ್‌ಐ ಸೋಮಲಿಂಗ ಒಡೆಯರ್, ತನುಜಾ ಐನಾಪೂರ ಇದ್ದರು.