ನವದೆಹಲಿ: ಜಗತ್ತಿನ ಎಲ್ಲಾ ಪ್ರಾಣಿಗಳಲ್ಲಿ ಅತಿ ವೇಗವಾಗಿ ಓಡುವ ಪ್ರಾಣಿಯೆಂಬ ಹಿರಿಮೆ ಗಳಿಸಿರುವ ಚಿರತೆಗಳ ಸಂತತಿಯು ಭಾರತದಲ್ಲಿ ಬೆಳೆಯುವಂತೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಭಾರತದಲ್ಲಿ ಚಿರತೆಗಳ ಆಶ್ರಯತಾಣಗಳು ನಾಶವಾಗಿರುವ ಹಿನ್ನೆಲೆಯಲ್ಲಿ ಅವುಗಳ ಸಂತತಿ ಸಂಪೂರ್ಣವಾಗಿ ನಾಶವಾಗಿವೆ. ಈ ಹಿನ್ನೆಲೆಯಲ್ಲಿ ನಮೀಬಿಯಾದಿಂದ ಚಿರತೆಗಳನ್ನು ತರಿಸಿಕೊಂಡು ಭಾರತದಲ್ಲಿ ಚಿರತೆಗಳ ವಂಶೋದ್ಧಾರಕ್ಕೆ ಮುಂದಾಗಲು ಕೇಂದ್ರ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ, ನಮೀಬಿಯಾ ಸರ್ಕಾರದೊಂದಿಗೆ ಒಡಂಬಡಿಕೆಯೊಂದಕ್ಕೆ ಭಾರತ ಸಹಿ ಹಾಕಿದೆ. ಇದರ ಪರಿಣಾಮ, ಮುಂದಿನ ತಿಂಗಳು ನಮೀಬಿಯಾದಿಂದ ನಾಲ್ಕು ಗಂಡು ಚಿರತೆಗಳು ಹಾಗೂ ಹಲವಾರು ಹೆಣ್ಣು ಚಿರತೆಗಳನ್ನು ಭಾರತಕ್ಕೆ ತರಲಾಗುತ್ತದೆ.
ಇವುಗಳನ್ನು ಮಧ್ಯಪ್ರದೇಶದ ಶವೊಪುರದಲ್ಲಿರುವ ಕುನೋ-ಪಾಲ್ಪುರ್ ರಾಷ್ಟ್ರೀಯ ಉದ್ಯಾನವನದಲ್ಲಿ ಇರಿಸಲಾಗುತ್ತದೆ. ಆಗಸ್ಟ್ 15ರೊಳಗಾಗಿ ನಮೀಬಿಯಾ ಚಿರತೆಗಳು ಭಾರತದಲ್ಲಿ ಆಶ್ರಯ ಪಡೆಯುವ ಸಾಧ್ಯತೆಗಳಿವೆ ಎಂದು ಕೇಂದ್ರ ಪರಿಸರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ತಳಿಯ ಚಿರತೆಗಳು ದಕ್ಷಿಣ ಆಫ್ರಿಕಾದಲ್ಲೂ ಇದ್ದು, ಅವುಗಳನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಮಾತುಕತೆಗಳು ಸಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.