ನವದೆಹಲಿ: ರಷ್ಯಾ ಮತ್ತು ಉಕ್ರೈನ್ ನಡುವೆ ಮುಂದುವರಿದಿರುವ ಯುದ್ಧದಲ್ಲಿ ಕೆಲವು ಭಾರತೀಯರು ಸಿಕ್ಕಿಹಾಕಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ನಡುವೆಯೇ ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ರಷ್ಯಾದಲ್ಲಿ ಸಿಲುಕಿರುವ ಭಾರತೀಯರ ಬಿಡುಗಡೆಗಾಗಿ ರಷ್ಯಾದ ಅಧಿಕಾರಿಗಳ ಜತೆ ಮಾತುಕತೆ ನಡೆಯುತ್ತಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:UP; ನಕಲು ತಡೆಯಲು ಕಠಿಣ ಕ್ರಮ; 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು
ಹಲವಾರು ಮಂದಿ ಭಾರತೀಯರನ್ನು ರಷ್ಯಾ ಸೇನೆ ಉಕ್ರೈನ್ ವಿರುದ್ಧದ ಯುದ್ಧದಲ್ಲಿ ಬಳಸಿಕೊಂಡಿರುವುದಾಗಿ ಸುದ್ದಿ ಪ್ರಸಾರವಾಗಿತ್ತು. ಕೆಲವು ಭಾರತೀಯರು ಏಜೆಂಟರ ಮೂಲಕ ಉದ್ಯೋಗ ನಿಮಿತ್ತ ರಷ್ಯಾಕ್ಕೆ ತೆರಳಿದ್ದು, ಅವರನ್ನು ಉಕ್ರೈನ್ ವಿರುದ್ಧದ ಯುದ್ಧದಲ್ಲಿ ಬಳಸಿಕೊಳ್ಳಲಾಗಿದೆ ಎಂದು ವರದಿಯಾಗಿತ್ತು.
ಕೆಲವು ಭಾರತೀಯ ಪ್ರಜೆಗಳು ರಷ್ಯಾ ಸೇನೆಯಲ್ಲಿ ಸೇರುವುದಾಗಿ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ನಮಗೆ ತಿಳಿದಿರುವುದಾಗಿ ಕೇಂದ್ರ ಸರ್ಕಾರ ಹೇಳಿದ್ದು, ಈ ನಿಟ್ಟಿನಲ್ಲಿ ಭಾರತೀಯ ರಾಯಭಾರ ಕಚೇರಿ ರಷ್ಯಾದ ಅಧಿಕಾರಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿದೆ. ಅಲ್ಲದೇ ರಷ್ಯಾ ಮತ್ತು ಉಕ್ರೈನ್ ನಡುವೆ ಸಂಘರ್ಷದಿಂದ ಎಲ್ಲಾ ಭಾರತೀಯರು ದೂರ ಉಳಿಯಬೇಕೆಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರಷ್ಯಾ ಸೇನೆಯಲ್ಲಿ ಸಿಲುಕಿರುವ ಹೈದರಾಬಾದ್ ಮೂಲದ ವ್ಯಕ್ತಿಯ ಕುಟುಂಬದ ಸದಸ್ಯರು ಹಾಗೂ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ, ಗುರುವಾರ ಭಾರತೀಯರ ಸುರಕ್ಷಿತ ಬಿಡುಗಡೆಗಾಗಿ ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿಕೊಂಡಿದ್ದರು.