ನವ ದೆಹಲಿ : ಕೋವಿಡ್ ಲಸಿಕೆಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಉದ್ದೇಶದಿಂದ ಭಾರತ ಜಾಗತಿಕ ಲಸಿಕೆ ಉತ್ಪಾದಕರಾದ ಫೈಜರ್, ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತು ಮಾಡೆರ್ನಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶ್ರಿಂಗ್ಲಾ ಹೇಳಿದ್ದಾರೆ.
ಭಾರತದಲ್ಲಿ ಇತರೆ ದೇಶಗಳಿಗಿಂತ ಜನ ಸಂಖ್ಯೆ ಜಾಸ್ತಿಇದ್ದು, ಲಸಿಕೆಯ ಕೊರತೆಯೂ ಇದೆ. ಹಾಗಾಗಿ ಭಾರತೀಯರೆಲ್ಲರಿಗೂ ಲಸಿಕೆಗಳನ್ನು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಾತುಕತೆಗೆ ಮುಂದಾಗಿದೆ.
ಇದನ್ನೂ ಓದಿ : ರೈತರಿಗೆ ವಿತರಿಸಲು ಸಂಗ್ರಹಿಸಿದ್ದ ಬಿತ್ತನೆ ಬೀಜದಲ್ಲಿ ಕಲಬೆರಕೆ: ಶಾಸಕ ಪರಣ್ಣ ಗರಂ
ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಆರೋಗ್ಯ ಪಾಲುದಾರರ ವೇದಿಕೆಯಲ್ಲಿ ಕೋವಿಡ್ 19 ಕುರಿತು ಮಾತನಾಡುತ್ತಾ ಶ್ರಿಂಗ್ಲಾ, ಸ್ಥಳೀಯವಾಗಿ ಲಸಿಕೆಗಳನ್ನು ತಯಾರಿಸುವ ಮತ್ತು ಅದನ್ನು ಜನರಿಗೆ ಪೂರೈಸುವ ಉದ್ದೇಶದಿಂದ ಭಾರತದ ಜಾಗತಿಕ ಲಸಿಕೆಗಳ ಉತ್ಪಾದಕರುಗಳಾದ ಫೈಜರ್, ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತು ಮಾಡೆರ್ನಾ ಸಂಸ್ಥೆಗಳೊಂದಿಗೆ ಉನ್ನತ ಮಟ್ಟದ ಮಾತುಕತೆಗಳನ್ನು ಮಾಡುತ್ತಿದೆ ಎಂದಿದ್ದಾರೆ.
ಸದ್ಯ, ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೋವಿಶೀಲ್ಡ್, ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೊವಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳನ್ನು ನೀಡಲಾಗುತ್ತಿದೆ. ಕಳೆದ ತಿಂಗಳು ರಷ್ಯಾದಿಂದ ಮೊದಲ ಹಂತದ ಸ್ಪುಟ್ನಿಕ್ ವಿ ಲಸಿಕೆಗಳನ್ನು ಸ್ವೀಕರಿಸಿಕೊಂಡಿದ್ದು, ಈ ಲಸಿಕೆಯನ್ನು ಭಾರತೀಯ ಕಂಪನಿಗಳು ಸಹ ಉತ್ಪಾದಿಸಲಿವೆ. ಫೈಜರ್, ಜಾನ್ಸನ್ ಆ್ಯಂಡ್ ಜಾನ್ಸನ್ ಮತ್ತು ಮಾಡರ್ನಾ ಲಸಿಕೆಗಳ ಸಂಭಾವ್ಯ ಸ್ಥಳಿಯ ಉತ್ಪಾದನೆಯ ಬಗ್ಗೆ ಭಾರತ ಸರ್ಕಾರ ವಿಚಾರ ಮಾಡುತ್ತಿದೆ ಎಂದಿದ್ದಾರೆ.
ಇನ್ನು, ಭಾರತ್ ಬಯೋಟೆಕ್ ತಯಾರಿಸಿದ ಕೊವಾಕ್ಸಿನ್ ಲಸಿಕೆಯನ್ನು ಜಾಗತಿಕವಾಗಿ ಬಳಸಲು ಅನುಮೋದನೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ನಿರ್ಧಾರವನ್ನು ಭಾರತ ಸರ್ಕಾರ ಎದುರುಗಾಣುತ್ತಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಏಪ್ರಿಲ್ 19 ರಂದು ಡಬ್ಲ್ಯುಎಚ್‌ಒ ಫಾರ್ ಎಮರ್ಜೆನ್ಸಿ ಯೂಸ್ ಲಿಸ್ಟಿಂಗ್ (ಇಯುಎಲ್) ಗೆ ಅರ್ಜಿಯನ್ನು ಸಲ್ಲಿಸಿದ್ದು, ಜೂನ್ ನಲ್ಲಿ ಪೂರ್ವ ಸಲ್ಲಿಕೆ ಸಭೆ ನಡೆಯಲಿದೆ.
ಇದನ್ನೂ ಓದಿ : ಕೋವಿಡ್ ನಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರಿಗೆ 2 ಲಕ್ಷ ರೂ. ಸಹಾಯಧನ ಘೋಷಿಸಿದ ಸರ್ಕಾರ