Advertisement
ಸರಕಾರದ ಹಲವಾರು ಬಡತನ ನಿವಾರಣ ಯೋಜನೆಗಳ ಹೊರತಾಗಿಯೂ ಅಸಮಾನತೆ ಅಪೌಷ್ಠಿಕತೆ ಹಾಗೂ ಬಡತನದ ಸಂಯೋಜಿತ ಸಮಸ್ಯೆಗಳು ಭಾರತದಲ್ಲಿ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಆಹಾರ, ಬಟ್ಟೆ, ವಸತಿ, ಶುದ್ಧ ಕುಡಿಯುವ ನೀರು, ಆರೋಗ್ಯ ಸೌಲಭ್ಯಗಳಂತಹ ಮೂಲಭೂತ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದ ಅದೆಷ್ಟೋ ಕುಟುಂಬಗಳು ನಮ್ಮ ಸುತ್ತ ಮುತ್ತಲಿವೆ.
Related Articles
Advertisement
ಇತ್ತೀಚೆಗಷ್ಟೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ವರದಿಯು ಕೂಡ ಭಾರತದಲ್ಲಿ ಕಡುಬಡತನ ಬಹುತೇಕ ನಿರ್ಮೂಲನೆಯಾಗಿದೆ ಎಂದು ಹೇಳಿದೆ. ಸರಕಾರಗಳು ಉಚಿತ ಆಹಾರ ಪೂರೈಸುತ್ತಿ ರುವುದರಿಂದ ಭಾರತದಲ್ಲಿನ ತೀವ್ರತರ ಬಡತನ ಕಳೆದ 40 ವರ್ಷಗಳಲ್ಲಿ ಈಗ ಕನಿಷ್ಠಕ್ಕೆ ಕುಸಿದಿದೆ ಎಂದು ಹೇಳಿತ್ತು. ಈಗ ವಿಶ್ವಬ್ಯಾಂಕ್ ಕೂಡ ಭಾರತದಲ್ಲಿ ಕಡುಬಡವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿದಿರುವ ಬಗ್ಗೆ ಹೇಳಿರುವುದು ಆಶಾಭಾವನೆ ಮೂಡಿಸಿದೆ.
ವಿಶ್ವಬ್ಯಾಂಕ್‌ನ ವರದಿಯ ಪ್ರಕಾರ ಕೃಷಿ ಕ್ಷೇತ್ರದಲ್ಲಿ ಆದಾಯದ ಹೆಚ್ಚಳ ಕಂಡುಬಂದಿದೆ. ಭಾರತದಲ್ಲಿ 2011-2019ರ ನಡುವೆ ಅತೀ ಸಣ್ಣ ಕೃಷಿಕರ ನೈಜ ಆದಾಯ ಶೇ. 10ರಷ್ಟು ಹೆಚ್ಚಾಗಿದೆ. ದೊಡ್ಡ ಕೃಷಿಕರ ಆದಾಯ ಶೇ. 2ರಷ್ಟು ಮಾತ್ರ ಹೆಚ್ಚಾಗಿದೆ ಎಂದೂ ತಿಳಿಸಿದೆ.
ಗ್ರಾಮೀಣ ಪ್ರದೇಶದಲ್ಲಿನ ಬಡತನ 2019ರಲ್ಲಿ ಶೇಕಡಾ 11.9ಕ್ಕೆ ಇಳಿಕೆಯಾಗಿದೆ. ಇದು 2011ರಲ್ಲಿ ಶೇಕಡಾ 26.3ರಷ್ಟಿತ್ತು. ಇನ್ನು ಭಾರತದ ನಗರದಲ್ಲಿ 2011ರಲ್ಲಿ 14.2ರಷ್ಟು ಬಡತವಿತ್ತು. 2019ರ ವೇಳೆಗೆ ಇದೇ ಬಡತನ ಪ್ರಮಾಣ ಶೇಕಡಾ 6.3ಕ್ಕೆ ಇಳಿಕೆಯಾಗಿದೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ.
ವಿಶ್ವಬ್ಯಾಂಕ್‌ನ ಇಬ್ಬರು ಅರ್ಥಶಾಸ್ತ್ರಜ್ಞರಾದ ಸುತೀರ್ಥ ಸಿನ್ಹಾ ರಾಯ್ ಹಾಗೂ ರಾಯ್ ವ್ಯಾನ್ ಡೇವಿಡ್ ಈ ವರದಿ ಸಿದ್ಧಪಡಿಸಿದ್ದಾರೆ. ಖಾಸಗಿ ದತ್ತಾಂಶ ಕಂಪೆನಿಯೊಂದು ಅನುಭೋಗಿಗಳ ಗೃಹ ಸಮೀಕ್ಷೆ ಮೂಲಕ ಪಡೆದ ಅಂಕಿ-ಅಂಶಗಳನ್ನು ಬಳಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
ಕೋವಿಡ್ ಕಾಲದಲ್ಲೂ ಹೆಚ್ಚಲಿಲ್ಲ :
ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ವರದಿಯ ಪ್ರಕಾರ ಕೋವಿಡ್ ಸಾಂಕ್ರಾಮಿಕ ರೋಗದ ಪೂರ್ವದ ಅವಧಿಯಾದ 2019ರಲ್ಲಿ ಭಾರತದಲ್ಲಿನ ತೀವ್ರ ಬಡತನ ಶೇ. 0.8ರಷ್ಟಿತ್ತು. ಆದರೆ ಸಾಂಕ್ರಾಮಿಕ ಕಾಣಿಸಿಕೊಂಡ 2020ರಲ್ಲೂ ಈ ತೀವ್ರ ಬಡತನ ಹೆಚ್ಚಳವಾಗದೆ ಹಿಂದಿನ ಪ್ರಮಾಣದಲ್ಲೇ ಮುಂದುವರೆದಿದೆ. ಇದರಲ್ಲಿ ಸರಕಾರ ರೂಪಿಸಿದ ಆಹಾರ ಭದ್ರತೆ ಯೋಜನೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆಯೆಂದು ವರದಿ ವಿಶ್ಲೇಷಿಸಿದೆ. ಜತೆಗೆ ದಶಕಗಳಲ್ಲೇ ಮೊದಲ ಬಾರಿಗೆ ಗಂಭೀರ ಬಡತನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿತು.
ಬಡತನವನ್ನು ವ್ಯಾಖ್ಯಾನಿಸುವ ಸರ್ವ ಸಮ್ಮತವಾದ ಒಂದೇ ಮಾನದಂಡ ಸಿಗುವುದಿಲ್ಲ. ಸಾಮಾನ್ಯವಾಗಿ “ಬಡತನ’ ಎಂದರೆ ಒಬ್ಬ ವ್ಯಕ್ತಿಯು ತನ್ನ ಮೂಲ ಅಗತ್ಯಗಳಾದ ಆಹಾರ, ಮನೆ, ಬಟ್ಟೆ, ಕುಡಿಯುವ ನೀರು ಆರೋಗ್ಯ ಮುಂತಾದವುಗಳನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿ. ತೀವ್ರ ಬಡತನ ಎಂದರೆ ಆದಾಯ, ಮನೆ, ಆರೋಗ್ಯ ಅಥವಾ ದಿನಕ್ಕೆ ಎರಡು ಬಾರಿ ಆಹಾರವಿಲ್ಲದೆ ಇರುವ ವ್ಯಕ್ತಿಗಳು. ಅಲ್ಲದೆ ಹಾಸಿಗೆ ಹಿಡಿದಿರುವವರು, ಆಹಾರ ತಯಾರು ಮಾಡಲು ಮತ್ತು ತಿನ್ನಲು ಸೌಲಭ್ಯವಿಲ್ಲದವರು, ಆರೋಗ್ಯ ಸಮಸ್ಯೆಗಳಿಂದ ಸಾಲವನ್ನು ಹೊಂದಿರುವವರು ಅತ್ಯಂತ ಬಡವರ ವರ್ಗದ ಪಟ್ಟಿಗೆ ಬರುತ್ತಾರೆ. ಆದ್ದರಿಂದ ಅವರು ಬಡತನದಲ್ಲಿ ವಾಸಿಸುತ್ತಿದ್ದಾರೆ ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಬಡತನದ ವ್ಯಾಖ್ಯೆಯನ್ನು ಆತನ ಕೊಳ್ಳುವ ಸಾಮರ್ಥ್ಯವನ್ನು ಬಳಸಿಕೊಂಡು ಮಾಪನ ಮಾಡಲಾಗುತ್ತದೆ. ವಿಶ್ವಬ್ಯಾಂಕ್ ಪ್ರಕಾರ ವ್ಯಕ್ತಿಯೊಬ್ಬನ ದಿನದ ಕೊಳ್ಳುವ ಸಾಮರ್ಥ್ಯ 1.9 ಡಾಲರ್ (142 ರೂ.)ಗಿಂತ ಕಡಿಮೆ ಇದ್ದರೆ ಆತನನ್ನು ತೀವ್ರ ಬಡತನದಲ್ಲಿರುವ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಇದನ್ನು 2011ರ ಕೊಳ್ಳುವ ಸಾಮರ್ಥ್ಯದ ಸಮಾನತೆಯ ಬೆಲೆಗಳಲ್ಲಿ ಅಳೆಯಲಾಗುತ್ತದೆ.
ಭಾರತವು ಈಗ ಅತ್ಯಂತ ಬಡತನದ ದೇಶವಲ್ಲ ಎಂದು ಬ್ರೂಕಿಂಗ್ಸ್ ವರದಿ ಹೇಳುತ್ತದೆ. ಜಾಗತಿಕ ಬಡತನದ ಶ್ರೇಯಾಂಕದಲ್ಲಿ ಭಾರತವು ಕುಸಿಯುತ್ತಿದೆ. ವಿಶ್ವ ಬಡತನ ಗಡಿಯಾರದ (world poverty clock) ನೈಜ-ಸಮಯದ ಮಾಹಿತಿಯ ಪ್ರಕಾರ, ಭಾರತೀಯ
ಜನಸಂಖ್ಯೆಯ ಶೇ. 7 ಮಂದಿ ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ ಮತ್ತು 0.6 ಭಾರತೀಯರು ಪ್ರತೀ ನಿಮಿಷಕ್ಕೆ ತೀವ್ರ ಬಡತನದಿಂದ ಪಾರಾಗುತ್ತಿದ್ದಾರೆ.
ಭಾರತ ಈಗ ಚೀನವನ್ನೇ ಮೀರಿಸುವಷ್ಟು ವೇಗವಾಗಿ ಆರ್ಥಿಕತೆಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. 2022ನೇ ಇಸವಿಯಲ್ಲಿ ಭಾರತ ಶೇ. 8.2ರಷ್ಟು ಪ್ರಗತಿ ಕಾಣಲಿದೆ. ಇದು ಜಗತ್ತಿನಲ್ಲಿಯೇ ಅತೀ ವೇಗದ ಅಭಿವೃದ್ಧಿ ಹೊಂದಲಿರುವ ಆರ್ಥಿಕತೆ ಎನಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ತಿಳಿಸಿದೆ.
ಆಶಾದಾಯಕ ಬೆಳವಣಿಗೆ :
ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಮೇಲಿನ ಭಾರತ ಸರಕಾರವು ಅಧಿಕ ಹೂಡಿಕೆಯನ್ನು ಮಾಡುತ್ತಿರುವುದು ಆಶಾದಾಯಕ ವಿಚಾರ. ಇದು ಗ್ರಾಮ ಹಾಗೂ ಕೃಷಿ ಅವಲಂಬಿತರ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಬಡತನವನ್ನು ಕಡಿಮೆ ಮಾಡಲು ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತಿದೆ. 2030ರ ವೇಳೆಗೆ, ಎಲ್ಲೆಡೆ ಇರುವ ತೀವ್ರ ಬಡತನವನ್ನು ನಿರ್ಮೂಲನೆ ಮಾಡುವುದು ಸರಕಾರದ ಗುರಿಯಾಗಿದೆ. ಕೃಷಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬದಲಾವಣೆ ಯಾಗುತ್ತಿರುವುದು ಗಮನಾರ್ಹ ಸಂಗತಿ. ಭಾರತ ಗ್ರಾಮೀಣ ಹಾಗೂ ಕೃಷಿ ಪ್ರಧಾನವಾದ ದೇಶವಾಗಿರುವುದರಿಂದ ಮೊದಲಾಗಿ ಬದಲಾವಣೆ ಇಲ್ಲೇ ಆಗಬೇಕಿದೆ. ಕೃಷಿ ನಿರ್ಲಕ್ಷ್ಯದಿಂದಾಗಿ ಮುಂದಿನ ದಿನಗಳಲ್ಲಿ ಆಹಾರ ಬೇಳೆ ಕಾಳುಗಳ ಸಮಸ್ಯೆ ಉಂಟಾಗಬಹುದು. ಕೃಷಿಯಲ್ಲಿ ದೇಶ ಪ್ರಗತಿ ಹೊಂದಲು ಸರಕಾರದ ಅಧಿಕ ಪ್ರೋತ್ಸಾಹದ ಅಗತ್ಯವಿದೆ. ಮಾತ್ರವಲ್ಲದೆ ಸರಕಾರದ ಯೋಜನೆ ಗಳನ್ನು ಬದ್ಧತೆಯಿಂದ ಜನರಿಗೆ ತಲುಪಿಸುವುದು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಆಡಳಿತದ ಕರ್ತವ್ಯ ಹಾಗೂ ಜವಾಬ್ದಾರಿ ಆಗಿದೆ.
ಜನರು ಈ ಯೋಜನೆಗಳ ಉಪಯೋಗವನ್ನು ಸರಿಯಾಗಿ ಅರಿತು ಪಡೆದುಕೊಳ್ಳುವುದೂ ಅವಶ್ಯವಾಗಿದೆ. ಆದರೆ ದುರದೃಷ್ಟವಶಾತ್ ಸರಕಾರದ ಯೋಜನೆಗಳು ಜನರನ್ನು ಪೂರ್ಣ ಪ್ರಮಾಣದಲ್ಲಿ ತಲುಪುವುದರಲ್ಲಿ ಸೋತಿದೆ.ಹಾಗಾಗಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಸಾಧ್ಯವಾಗುವುದಿಲ್ಲ.
-ವಿದ್ಯಾ ಅಮ್ಮಣ್ಣಾಯ, ಕಾಪು