ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದ್ದ INDIA ಮೈತ್ರಿಕೂಟ ಇದೀಗ ಏಳು ರಾಜ್ಯಗಳಲ್ಲಿನ 13 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಇಂಡಿಯಾ ಮೈತ್ರಿಕೂಟ ಜಯಸಾಧಿಸಿದ್ದು, ಆರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದಾಗಿ ವರದಿ ತಿಳಿಸಿದೆ.
ಏಳು ರಾಜ್ಯಗಳಲ್ಲಿ ತೆರವಾಗಿದ್ದ 13 ವಿಧಾನಸಭಾ ಕ್ಷೇತ್ರಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿತ್ತು. ಶನಿವಾರ (ಜುಲೈ13) ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ನಡೆಯುತ್ತಿದ್ದು, ಸಂಜೆಯೊಳಗೆ ಪೂರ್ಣ ಪ್ರಮಾಣದ ಫಲಿತಾಂಶ ಹೊರಬೀಳಲಿದೆ ಎಂದು ವರದಿ ವಿವರಿಸಿದೆ.
ಬುಧವಾರ ಪಂಜಾಬ್, ಹಿಮಾಚಲ್ ಪ್ರದೇಶ, ಉತ್ತರಾಖಂಡ್, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಬಿಹಾರ ಮತ್ತು ತಮಿಳುನಾಡಿನಲ್ಲಿ ಉಪಚುನಾವಣೆ ನಡೆದಿದ್ದು, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಪ್ ಮತ್ತು ದ್ರಾವಿಡ ಮುನ್ನೇತ್ರಾ ಕಳಗಂ(DMK) ಮೈತ್ರಿಕೂಟ ಇಂಡಿಯಾ ಒಕ್ಕೂಟ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಶ್ಚಿಲಬಂಗಾಳದ ಉಪಚುನಾವಣೆಯಲ್ಲಿ ಎಲ್ಲಾ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಹಿಮಾಚಲ್ ಪ್ರದೇಶದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಹಿಮಾಚಲದಲ್ಲಿ ಮುಖ್ಯಮಂತ್ರಿ ಸುಖ್ವಿಂದರ್ ಸುಕು ಅವರ ಪತ್ನಿ ಕಮಲೇಶ್ ಠಾಕೂರ್ ದೇಹ್ರಾ ಕ್ಷೇತ್ರದಲ್ಲಿ ಗೆಲುವಿನ ನಗು ಬೀರಿದ್ದಾರೆ.
ಆಮ್ ಆದ್ಮಿ ಪಕ್ಷ ಪಂಜಾಬ್ ನ ಜಲಂಧರ್ ಕ್ಷೇತ್ರದಲ್ಲಿ ವಿಜಯ ಸಾಧಿಸಿದೆ. ಪಂಜಾಬ್ ನ ಜಲಂಧರ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಮೋಹಿಂದರ್ ಭಗತ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಸುರೀಂದರ್ ಕೌರ್ ಅವರನ್ನು 35,325 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಹಿಮಾಚಲ್ ಪ್ರದೇಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಕಂಡಿದೆ. ಉಪಚುನಾವಣೆಯಲ್ಲಿನ ಎಲ್ಲಾ ಮೂರು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿದೆ. ಸಿಎಂ ಸುಖ್ವಿಂದರ್ ಸುಖು ಪತ್ನಿ ಕಮ್ಲೇಶ್ ಠಾಕೂರ್ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಹೋಶಿಯಾರ್ ಸಿಂಗ್ ಅವರನ್ನು 9,399 ಮತಗಳ ಅಂತರದಿಂದ ಪರಾಜಯಗೊಳಿಸಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಅಣ್ಣಿಯೂರ್ ಶಿವ ವಿಕ್ರಾವಂಡಿ ವಿಧಾನಸಭಾ ಕ್ಷೇತ್ರದಲ್ಲಿ 59 ಸಾವಿರ ಮತಗಳ ಮುನ್ನಡೆಯಲ್ಲಿದ್ದಾರೆ. ಉತ್ತರಾಖಂಡ್ ನ ಬದರಿನಾಥ್ ಮತ್ತು ಮಂಗ್ಲೌರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಬಿಹಾರದಲ್ಲಿ ರುಪಾಲಿ ಕ್ಷೇತ್ರದಲ್ಲಿ ಜೆಡಿಯುನ ಕಲಾಧರ್ ಪ್ರಸಾದ್ ಮಂಡಲ್ ಮುನ್ನಡೆಯಲ್ಲಿದ್ದಾರೆ.