ಮುಂಬೈ: ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ರವಿ ಶಾಸ್ತ್ರಿ ಅವರ ಅಂತ್ಯವಾಗುವ ಹಂತ ತಲುಪಿದೆ. ಮುಂದಿನ ಟಿ20 ವಿಶ್ವಕಪ್ ರವಿ ಶಾಸ್ತ್ರಿ ಅವರ ಕೋಚಿಂಗ್ ನ ಕೊನೆಯ ಕೂಟವಾಗಿರಲಿದೆ.
ಈ ಬಗ್ಗೆ ದಿ ಗಾರ್ಡಿಯನ್ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರವಿ ಶಾಸ್ತ್ರಿ, ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದು ನನಗೆ ತೃಪ್ತಿ ತಂದಿದೆ. ಇದರ ಜತೆಗೆ ಅಲ್ಪ ಪ್ರಮಾಣದ ಬೇಸರವೂ ಇದೆ ಎಂದಿದ್ದಾರೆ.
ನನ್ನ ಅವಧಿಯಲ್ಲಿ ತಂಡ ಹಲವಾರು ಮಹತ್ವದ ಪಂದ್ಯಗಳನ್ನು ಗೆದ್ದುಕೊಂಡಿದೆ. ಆದರೆ ಇನ್ನಷ್ಟು ಸಾಧನೆ ಮಾಡಬಹುದಿತ್ತು ಎಂದು ಈಗ ಅನಿಸುತ್ತಿದೆ ಎಂದು ಹೇಳಿದ್ದಾರೆ. ಅಕ್ಟೋಬರ್ 17 ರಿಂದ ಯುಎಇ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆಲ್ಲುವುದೆ ನಮ್ಮ ಮುಂದಿರುವ ಸವಾಲು. ಈಗಾಗಲೆ ನಮ್ಮ ತಂಡದ ಸದಸ್ಯರು ಅದಕ್ಕಾಗಿ ಎಲ್ಲ ಸಿದ್ದತೆ ನಡೆಸಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ
ನಾನು ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಭಾರತ ಸತತವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು ಎನ್ನುವುದು ನನಗೆ ಹೆಮ್ಮೆ ತರಿಸುವ ವಿಚಾರ. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ದ ಎರಡು ಬಾರಿ ಹಾಗೂ ಇಂಗ್ಲೆಂಡ್ನಲ್ಲಿ ಒಂದು ಬಾರಿ ಗೆಲುವು ಸಾಧಿಸಿರುವುದು ಸಾಮಾನ್ಯದ ಸಂಗತಿಯಲ್ಲ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.