ಲಂಡನ್: ಟೀಂ ಇಂಡಿಯಾದ ಕ್ಷೇತ್ರ ರಕ್ಷಣೆ ಅತ್ಯುತ್ತಮ ಮಟ್ಟದಲ್ಲಿದ್ದು, ಇದು ನಮಗೆ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ಸಹಾಯಕವಾಗಲಿದೆ ಎಂದು ಭಾರತ ತಂಡದ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಪಂದ್ಯ ಮಳೆಯಿಂದ ರದ್ದಾದ ನಂತರ ಮಾತನಾಡಿದ ರಾಮಕೃಷ್ಣನ್ ಶ್ರೀಧರ್, “ಮಳೆಯಿಂದ ಅಂಗಣ ಸಂಪೂರ್ಣ ಒದ್ದೆಯಾಗಿತ್ತು. ಅಂಪೈರ್ ಗಳಿಗೆ ಯಾವುದೇ ಅವಕಾಶ ಇರಲಿಲ್ಲ” ಎಂದು ಅಭಿಪ್ರಾಯ ಪಟ್ಟರು.
ಭಾರತದ ಕ್ಷೇತ್ರ ರಕ್ಷಣೆಯ ಬಗ್ಗೆ ಮಾತನಾಡಿದ ಅವರು, ಭಾರತೀಯ ಆಟಗಾರರು ಮೈದಾನದಲ್ಲಿ ತೋರುವ ಚುರುಕುತನದ ವರ್ತನೆಯಿಂದ ತಂಡಕ್ಕೆ ತುಂಬಾ ಲಾಭವಾಗುತ್ತದೆ. ಆಟಗಾರರು ಒಂಟಿ ರನ್ ತಡೆಯಲು ಅಪಾಯವಾದರೂ ಡೈವ್ ಹಾಕಲು ಹಿಂಜರಿಯುವುದಿಲ್ಲ. ಇದು ತಂಡದ ಉತ್ತಮ ಗುಣ ಎಂದರು.
ಕೈಬೆರಳಿಗೆ ಗಾಯ ಮಾಡಿಕೊಂಡಿರುವ ಶಿಖರ್ ಧವನ್ ಬಗ್ಗೆ ಮಾತನಾಡಿದ ಶ್ರೀಧರ್, ಧವನ್ ಅವರಿಗೆ ಬಾಲ್ ತ್ರೋ ಮಾಡಲು ಯಾವುದೇ ಸಮಸ್ಯೆಯಿಲ್ಲ. ಆದರೆ ಕ್ಯಾಚ್ ಪಡೆಯುವಾಗ ಕಷ್ಟವಾಗಬಹುದು. ಅದರಲ್ಲೂ ಧವನ್ ಸ್ಲಿಪ್ ಫೀಲ್ಡರ್ ಆಗಿರುವುದರಿಂದ ಕ್ಯಾಚ್ ಗಳು ತುಂಬಾ ವೇಗವಾಗಿ ಬರುತ್ತವೆ. ಧವನ್ ಗೆ ಹಗುರದ ಬಾಲ್ ಎಸೆದು ಅಭ್ಯಾಸ ನಡೆಸುತ್ತೇವೆ. ನಂತರ ಕ್ರಿಕೆಟ್ ಬಾಲ್ ಅಭ್ಯಾಸ ಎಂದರು.
ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 16ರಂದು ಪಾಕಿಸ್ಥಾನದ ವಿರುದ್ಧ ಆಡಲಿದೆ.