ಮುಂಬೈ: ಐಸಿಸಿ ಟಿ20 ವಿಶ್ವಕಪ್ ಗೆ ಕೆಲವೇ ವಾರಗಳು ಬಾಕಿ ಇರುವಂತೆ ತಂಡಗಳು ಸಿದ್ದತೆಯಲ್ಲಿ ತೊಡಗಿದೆ. ಇತ್ತ ಭಾರತ ತಂಡವೂ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡುತ್ತಿದ್ದು, ಎರಡನೇ ಪಂದ್ಯ ರವಿವಾರ ಗುವಾಹಟಿಯಲ್ಲಿ ನಡೆಯಲಿದೆ.
ತಿರುವನಂತಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತದ ವೇಗಿಗಳು ತಮ್ಮ ಸ್ವಿಂಗ್ ಬೌಲಿಂಗ್ ನಿಂದ ಕಮಾಲ್ ಮಾಡಿದ್ದರು. ಆರಂಭದಲ್ಲಿ ಬಿಗು ದಾಳಿಯಿಂದಾಗಿ ದ.ಆಫ್ರಿಕಾ ತಂಡವು 9 ರನ್ ಗೆ ಐದು ವಿಕೆಟ್ ಕಳೆದುಕೊಂಡಿತ್ತು. ಬಿಗು ದಾಳಿ ನಡೆಸಿದ್ದ ಅರ್ಶದೀಪ್ ಸಿಂಗ್ ಮೂರು ವಿಕೆಟ್ ಕಿತ್ತಿದ್ದರು.
ಅರ್ಶದೀಪ್ ಸಿಂಗ್ ಬಗ್ಗೆ ಮಾತನಾಡಿದ ಪಾಕಿಸ್ಥಾನದ ಮಾಜಿ ಕೀಪರ್ ಕಮ್ರಾನ್ ಅಕ್ಮಲ್, ಭಾರತಕ್ಕೆ ಮತ್ತೊಬ್ಬ ಜಹೀರ್ ಖಾನ್ ಸಿಕ್ಕಿದ್ದಾನೆ ಎಂದಿದ್ದಾರೆ.
“ಅರ್ಶದೀಪ್ ಅವರು ಪೇಸ್ ಮತ್ತು ಸ್ವಿಂಗ್ ಎರಡನ್ನೂ ಹೊಂದಿದ್ದಾರೆ. ಅವರು ಬುದ್ಧಿವಂತಿಕೆಯಿಂದ ಬೌಲಿಂಗ್ ಮಾಡುತ್ತಾರೆ. ಮಾನಸಿಕವಾಗಿ ಪ್ರಬಲರಾಗಿದ್ದಾರೆ. ಅರ್ಶದೀಪ್ ಗೆ ಅವರ ಸಾಮರ್ಥ್ಯಗಳು ತಿಳಿದಿವೆ. ಹೀಗಾಗಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವುಗಳನ್ನು ಬಳಸುತ್ತಾರೆ” ಎಂದು ಅಕ್ಮಲ್ ವಿವರಿಸಿದರು.
ಇದನ್ನೂ ಓದಿ:ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ; ಅ.1ರಿಂದ ನೂತನ ದರ ಅನ್ವಯ
ಯುವಕನಾಗಿದ್ದರೂ ಅರ್ಶದೀಪ್ ಬೌಲಿಂಗ್ ಬುದ್ಧಿವಂತಿಕೆ ಮತ್ತು ಪ್ರಬುದ್ಧತೆಯನ್ನು ಹೊಂದಿದ್ದಾರೆ. ಇದು ಭಾರತ ತಂಡಕ್ಕೆ ಉತ್ತಮ ಸಂಕೇತ ಎಂದು ಪಾಕ್ ಮಾಜಿ ಕೀಪರ್ ಹೇಳಿದ್ದಾರೆ.