Advertisement
ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಭಾರತವು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸ್ಥಾಪಿಸಿದೆ. ದ್ವಿತೀಯ ಪಂದ್ಯವನ್ನು ಗೆದ್ದರೆ ಸರಣಿ ತನ್ನದಾಗಿಸಿಕೊಳ್ಳಲಿದೆ. ಒಂದು ವೇಳೆ ಶ್ರೀಲಂಕಾ ಗೆದ್ದರೆ ಮೂರನೇ ಪಂದ್ಯ ನಿರ್ಣಾಯಕವೆನಿಸಲಿದೆ.
Related Articles
Advertisement
ಭಾರತ 2015ರಲ್ಲಿ ಇಲ್ಲಿ ನಡೆದ ಪಂದ್ಯದಲ್ಲಿ ಜಯ ಸಾಧಿಸಿತ್ತು. ಅದಕ್ಕಿಂತ ಮೊದಲು 1993ರಲ್ಲಿ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಡಿ ಭಾರತ 235 ರನ್ನುಗಳಿಂದ ಜಯ ಸಾಧಿಸಿತಲ್ಲದೇ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತ್ತು. ಈ ಎರಡು ಸರಣಿ ಗೆಲುವಿನ ಅಂತರ 22 ವರ್ಷ ಎಂಬುದನ್ನು ಕೋಚ್ ರವಿಶಾಸಿŒ ತಂಡದ ಸದಸ್ಯರಿಗೆ ಮನದಟ್ಟು ಮಾಡಿದ್ದಾರೆ.
2015ರಲ್ಲಿ ಅಷ್ಟೊಂದು ಬಲಿಷ್ಠವಲ್ಲದ ಶ್ರೀಲಂಕಾ ತಂಡವನ್ನು ಎದುರಿಸಿ ಭಾರತ ಜಯಭೇರಿ ಬಾರಿಸಿತ್ತು. ಈ ಬಾರಿ ಕೊಹ್ಲಿ ಪಡೆ ಸರಣಿ ಗೆಲುವಿನ ಪುನರಾವರ್ತನೆಗೈದು ಕೋಚ್ ಅವರ ಮಾತಿಗೆ ಬೆಲೆ ಕೊಡಲು ಪ್ರಯತ್ನಿಸಬೇಕಾಗಿದೆ.2015ಕ್ಕೆ ಹೋಲಿಸಿದರೆ ಈ ಬಾರಿ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಮೊದಲ ಟೆಸ್ಟ್ ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ಬ್ಯಾಟಿಂಗ್, ಬೌಲಿಂಗ್‌ನಲ್ಲಿಯೂ ಬಲಿಷ್ಠವಾಗಿದೆ. ಇಲ್ಲಿನ ಪಿಚ್ ಗಾಲೆ ಪಿಚ್‌ನ ಹಾಗೇ ಇರುವುದು ಭಾರತೀಯರಿಗೆ ಖುಷಿ ನೀಡಿದೆ. ಶ್ರೀಲಂಕಾಕ್ಕೆ ಹೋಲಿಸಿದರೆ ಭಾರತ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ರ್‍ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೆ ಶ್ರೀಲಂಕಾ 7ನೇ ಸ್ಥಾನದಲ್ಲಿದೆ. ಮೊದಲ ಟೆಸ್ಟ್ ಸೋತಿರುವ ಶ್ರೀಲಂಕಾ ಈ ಪಂದ್ಯದಲ್ಲಾದರೂ ತಿರುಗೇಟು ನೀಡಲು ಪ್ರಯತ್ನಿಸಬೇಕಾಗಿದೆ. ಚಂಡಿಮಾಲ್ ಲಭ್ಯ: ನಾಯಕ ದಿನೇಶ್ ಚಂಡಿ ಮಾಲ್ ನ್ಯುಮೋನಿಯದಿಂದ ಚೇತರಿಸಿಕೊಂಡಿದ್ದು ದ್ವಿತೀಯ ಟೆಸ್ಟ್‌ಗೆ ಲಭ್ಯರಿದ್ದಾರೆ. ಅವರ ಸೇರ್ಪಡೆ ಯಿಂದ ಶ್ರೀಲಂಕಾದ ಬ್ಯಾಟಿಂಗ್ ಬಲಿಷ್ಠವಾಗಲಿದೆ. 2015ರಲ್ಲಿ ಗಾಲೆಯಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತೀಯ ದಾಳಿಯನ್ನು ಪುಡಿಗಟ್ಟಿದ್ದ ಚಂಡಿಮಾಲ್ 169 ಎಸೆತಗಳಿಂದ 162 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿಯಾದರೂ ಚಂಡಿಮಾಲ್ ಭಾರತ ವಿರುದ್ಧ ಸ್ಫೋಟಕ ಆಟವಾಡುವ ನಿರೀಕ್ಷೆಯನ್ನು ಶ್ರೀಲಂಕಾ ಇಟ್ಟುಕೊಂಡಿದೆ. ಮೊದಲ ಟೆಸ್ಟ್‌ನಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಎಡ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಆಸೇಲ ಗುಣರತ್ನೆ ಅವರ ಬದಲಿಗೆ ಅನುಭವಿ ಬ್ಯಾಟ್ಸ್‌ಮನ್ ಲಹಿರು ತಿರಿಮನ್ನೆ ಅವರನ್ನು ಕೂಡ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಗುಣರತ್ನೆ ಸರಣಿಯ ಇನ್ನುಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ತಿರಿಮನ್ನೆ ಈ ಹಿಂದೆ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಪರ ಟೆಸ್ಟ್ ಆಡಿದ್ದರು. ಮೊದಲ ಟೆಸ್ಟ್‌ಗೆ ಮುಂಚಿತವಾಗಿ ಕೊಲಂಬೊದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ತಿರಿಮನ್ನೆ 59 ರನ್ ಹೊಡೆದಿದ್ದರು. ರಂಗನ ಹೆರಾತ್ ಅವರ ಬದಲಿಗೆ ಎಡಗೈ ಸ್ಪಿನ್ನರ್ ಲಕ್ಷಣ್ ಸಂಡಕನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಗಾಲೆಯಲ್ಲಿ ಪ್ರಭಾರ ನಾಯಕರಾಗಿ ಕರ್ತವ್ಯ ನಿಭಾಯಿಸಿದ್ದ ಹೆರಾತ್ ಕೂಡ ಫೀಲ್ಡಿಂಗ್ ಮಾಡುವ ವೇಳೆ ಎಡಕೈಗೆ ಗಾಯ ಮಾಡಿಕೊಂಡಿದ್ದರು. ಸ್ಕ್ಯಾನ್‌ನಲ್ಲಿ ಯಾವುದೇ ಮುರಿತ ಆಗಿರುವ ಸೂಚನೆ ಸಿಕ್ಕಿಲ್ಲ. ಆದರೆ ನೋವಿನಿಂದಾಗಿ ಅವರು ಗಾಲೆಯಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರಲಿಲ್ಲ. ಅವರ ಫಿಟ್‌ನೆಸ್ ಪರೀಕ್ಷೆ ನಡೆಸಿದ ಬಳಿಕ ಆಟವಾಡುವ ಬಳಗಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ.