ಅರಸೀಕೆರೆ: ವಿಶ್ವದ ಶಾಂತಿ ಮತ್ತು ನೆಮ್ಮದಿಗೆ ಭಾರತದ ಕೊಡುಗೆ ಅಪಾರವಾಗಿದ್ದು, ಅನಾದಿ ಕಾಲದಿಂದಲು ಋಷಿ ಮುನಿಗಳು, ಯೋಗಿಗಳು, ಸಾಧು-ಸಂತರು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳುವ ಮೂಲಕ ಆರೋಗ್ಯವಂತ ಜೀವನ ನಡೆಸುತ್ತಿದ್ದರು. ಅಂತಹ ಯೋಗವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಸರ್ವರ ಆರೋಗ್ಯ ಕಾಪಾಡುವಲ್ಲಿ ಭಾರತೀಯ ಯೋಗ ಅತ್ಯಂತ ಸಹಕಾರಿಯಾಗಲಿದೆ ಎಂದು ಶಾಸಕ ಕೆ. ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ನಗರದ ಮೈಸೂರು ರಸ್ತೆಯಲ್ಲಿರುವ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಕೇಂದ್ರದ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ ಮಂಗಳವಾರ ಬೆಳಗ್ಗೆ ಏರ್ಪಡಿಸಿದ್ದ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಯೋಗಾ ಶರೀರ, ಮನಸ್ಸು, ಬುದ್ಧಿಗಳ ಸಮಗ್ರ ವಿಕಾಸಕ್ಕೆ ಪ್ರೇರಕ ಶಕ್ತಿಯಾಗುವುದಲ್ಲದೇ ಭಾರತೀಯ ಆಧ್ಯಾತ್ಮಿಕ ಚಿಂತನೆಯ ಪ್ರತೀಕವಾಗಿದ್ದು, ಈಗ ವಿಶ್ವಮಾನ್ಯತೆಯ ಮೆರಗು ಭಾರತೀಯ ಯೋಗಕ್ಕೆ ಬಂದಿರುವುದು ನಾವೆಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮನಸ್ಸಿನ ನಿಯಂತ್ರಣ ಸಾಧ್ಯ: ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಮಾತನಾಡಿ, ಪ್ರಧಾನಿ ಮೋದಿ ಅವರು ಭಾರತದ ಯೋಗ ಇಂದು ವಿಶ್ವಕ್ಕೆ ಪರಿಚಿಸುವ ಸುಯೋಗ ಅವಕಾಶವನ್ನು ನಮ್ಮಲ್ಲರಿಗೂ ಕಲ್ಪಿಸಿಕೊಟ್ಟಿದ್ದಾರೆ. ಯೋಗ ಅಭ್ಯಾಸ ಮಾಡುವುದರಿಂದ ದೇಹದ ಮೇಲೆ ಅಷ್ಟೇ ಅಲ್ಲದೇ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಹುದು.ಇಂದು ವಿಶ್ವ ಸಂಸ್ಥೆ ವತಿಯಿಂದಲೇ ಯೋಗ ದಿನಾಚರಣೆ ವಿಶ್ವದ್ಯಂತ ನಡೆಯುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಆರೋಗ್ಯದ ಮೂಲ ಯೋಗ: ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ಆಧುನಿಕ ಯುಗದ ಜೀವನ ಶೈಲಿ ಹಾಗೂ ಸದಾ ಒತ್ತಡದಲ್ಲಿ ಮನುಷ್ಯ ಕೆಲಸ ಮಾಡುತ್ತಿರುವ ಕಾರಣ ಆತ ದೈಹಿಕ ಮತ್ತು ಮಾನಸಿಕವಾಗಿ ದುರ್ಬಲನಾಗಿ ವಿವಿಧ ರೋಗ, ರುಜೀನಗಳಿಗೆ ತುತ್ತಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಮಾನಸಿಕ ಹಾಗೂ ದೈಹಿಕ ಸದೃಢತೆ ಕಾದುಕೊಳ್ಳಲು ಯೋಗಾ ಭ್ಯಾಸ ಉತ್ತಮ ಸಹಕಾರಿ. ಪ್ರತಿಯೊಬ್ಬರು
ನಿತ್ಯ ತಮ್ಮ ಶಕ್ತಿ ಅನುಸಾರವಾಗಿ ಯೋಗ ಅಭ್ಯಾಸ ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಡಿ ಪ್ರಸಾದ್, ತಾಪಂ ಇಒ, ಎಸ್.ಪಿ.ನಟರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಸರ್ಕಾರಿ ಜೆ.ಸಿ. ಆಸ್ಪತ್ರೆ ವೈದ್ಯಾಧಿಕಾರಿಗಳಾದ ಡಾ.ಸುರೇಶ್ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ಶಾಸಕ ಶಿವಲಿಂಗೇಗೌಡ ತಹಶೀಲ್ದಾರ್ ವಿಭಾ ವಿದ್ಯಾ
ರಾಥೋಡ್, ನಗರಸಭೆ ಅಧ್ಯಕ್ಷ ಗಿರೀಶ್.ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ನಗರದ ಶಾಲಾ-ಕಾಲೇಜು ವಿದ್ಯಾರ್ಥಿ ಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.