ಬಹು ನಿರೀಕ್ಷಿತ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಕ್ತಾಯವಾಗಿದೆ. ಡೆಮಾಕ್ರೆಟಿಕ್ ಪಕ್ಷದ ಜೋ ಬೈಡೆನ್ ನಿಯೋಜಿತ ಅಧ್ಯಕ್ಷರಾಗಿದ್ದಾರೆ. ಜತೆಗೆ ತಮಿಳುನಾಡು ಮೂಲದ ಕಮಲಾ ಹ್ಯಾರಿಸ್ ಅಲ್ಲಿನ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿದ್ದಾರೆ. ಈಗ ಎಲ್ಲರ ನಿರೀಕ್ಷೆ ಏನೆಂದರೆ ಹೊಸ ಆಡಳಿತ ವ್ಯವಸ್ಥೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಮತ್ತು ವ್ಯೂಹಾತ್ಮಕ ಬಾಂಧವ್ಯಗಳು ಯಾವ ರೀತಿ ಇರುತ್ತವೆ ಎನ್ನುವುದು ಕುತೂಹಲ ಕೆರಳಿಸಿದೆ. ಬರಾಕ್ ಒಬಾಮ ಆಡಳಿತದ ಅವಧಿಯಲ್ಲಿ ಜೋ ಬೈಡೆನ್ ಅಲ್ಲಿನ ಉಪಾಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿಯೇ ಭಾರತದ ಜತೆಗೆ ಎಲ್ಲ ರೀತಿಯಿಂದ ದೃಢವಾದ ಬಾಂಧವ್ಯ ಬೇಕು ಎಂದು ಪ್ರತಿಪಾದಿಸುತ್ತಿದ್ದವರು. “2020ರಲ್ಲಿ ಜಗತ್ತಿನಲ್ಲಿ ಅತ್ಯಂತ ನಿಕಟ ಬಾಂಧವ್ಯ ಇರುವ ರಾಷ್ಟ್ರಗಳೆಂದರೆ ಅಮೆರಿಕ ಮತ್ತು ಭಾರತ. ಆ ರೀತಿಯಾದ ವಾತಾವರಣ ಸೃಷ್ಟಿಯಾದರೆ ಜಗತ್ತು ನೆಮ್ಮದಿಯಿಂದ ಇರುತ್ತದೆ’ ಎಂದು 2006ರ ಡಿಸೆಂಬರ್‌ನಲ್ಲಿ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದರು. 2008ರಲ್ಲಿ ಸಹಿ ಹಾಕಲಾಗಿದ್ದ ನಾಗರಿಕ ಅಣು ಒಪ್ಪಂದದ ಬಗ್ಗೆ ಕೂಡ ಸಹಮತ ಹೊಂದಿದ್ದರು.
ಆ ಕಾಲಘಟ್ಟಕ್ಕೂ ಹಾಲಿ ಬೆಳವಣಿಗೆಗಳಿಗೂ ಅಜಗಜಾಂತರವಿದೆ ಎನ್ನುವುದು ಹಗಲಿನಷ್ಟೇ ಸತ್ಯವಾದ ಮಾತು. ಭಾರತದ ಆಡಳಿತ ವ್ಯವಸ್ಥೆಗೆ ಅಮೆರಿಕದಿಂದ ಸಾಕಷ್ಟು ನಿರೀಕ್ಷೆ ಇದೆ. ಅದರಲ್ಲಿ ಪ್ರಧಾನವಾಗಿ ಇರುವುದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ. ಮುಂದಿನ ವರ್ಷದಿಂದ 2 ವರ್ಷಗಳ ಕಾಲ ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಶಾಶ್ವತವಲ್ಲದ ಸದಸ್ಯತ್ವದ ಅವಧಿ ಶುರುವಾಗುತ್ತದೆ. ಈ ಸಂದರ್ಭದಲ್ಲಿ ಭದ್ರತಾ ಮಂಡಳಿ ಪುನರ್‌ರಚನೆ ಮತ್ತು ಸ್ಥಾನ ಪಡೆದುಕೊಳ್ಳುವ ಬಗ್ಗೆ ಕಾರ್ಯಾತ್ಮಕ ಯೋಜನೆಗಳು ಬರಬೇಕಿವೆ.
ಜಗತ್ತಿನಲ್ಲಿ ಎಲ್ಲರನ್ನೂ ಕಾಡುತ್ತಿರುವುದು ಚೀನ. ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರ ಭಾರತಕ್ಕೆ ಚೀನ ವಿಚಾರದಲ್ಲಿ ಏಕಾಏಕಿ ಬೆಂಬಲ ನೀಡಿದೆ ಎನ್ನುವುದು ಸ್ಪಷ್ಟ. ಲಡಾಖ್‌ನ ಗಾಲ್ವನ್‌ನಲ್ಲಿ ಚೀನದ ಸೇನೆ ಕಿಡಿಗೇಡಿತನ ನಡೆಸಿದ್ದಾಗ ಟ್ರಂಪ್ ಬಹಿರಂಗವಾಗಿಯೇ ಮೋದಿ ನೇತೃತ್ವದ ಸರಕಾರಕ್ಕೆ ಬೆಂಬಲ ನೀಡಿದ್ದರು. ಇನ್ನು ಚೀನ-ಅಮೆರಿಕ ಜತೆಗಿನ ಬಾಂಧವ್ಯ ಈಗಾಗಲೇ ಹಳಿ ತಪ್ಪಿದೆ. ಟ್ರಂಪ್ ಸರಕಾರ ಕಠಿನ ನಿಲುವು ಹೊಂದಿದ್ದರೆ, ಬೈಡೆನ್ ನೇತೃತ್ವದ ಸರಕಾರ ವ್ಯಕ್ತಪಡಿಸುವ ಅಭಿಪ್ರಾಯದ ವಿಧಾನ ಬೇರೆಯೇ ರೀತಿಯದ್ದಾಗಿರಬಹುದು.
ಭಾರತದ ಜತೆಗಿನ ಬಾಂಧವ್ಯದ ಬಗ್ಗೆ ಬೈಡೆನ್ ಅವರ ಪ್ರಚಾರದ ದಾಖಲೆಗಳಿಂದ ವ್ಯಕ್ತವಾದ ಮಾಹಿತಿ ಏನೆಂದರೆ ದಕ್ಷಿಣ ಏಷ್ಯಾ ವಲಯದಲ್ಲಿ ಕೇಂದ್ರ ಸರಕಾರದ ಜತೆಗೆ ಸದೃಢ ಬಾಂಧವ್ಯಕ್ಕೆ ಆದ್ಯತೆ ನೀಡಲಾಗಿದೆ. ಜತೆಗೆ ಹಾಲಿ 150 ಬಿಲಿಯನ್ ಡಾಲರ್ ಮೊತ್ತದ ವಾಣಿಜ್ಯ ವಹಿವಾಟನ್ನು 500 ಬಿಲಿಯನ್ ಡಾಲರ್‌ಗೆ ಏರಿಸುವ ಗುರಿ ಹೊಂದಿದ್ದಾರೆ. ಟ್ರಂಪ್ ಸರಕಾರಕ್ಕೆ ಚುನಾವಣೆಯಲ್ಲಿ ಪ್ರತಿಕೂಲವಾಗಿ ಕಂಡು ಬಂದ ಅಂಶವೆಂದರೆ ಎಚ್-1ಬಿ ವೀಸಾ ನೀಡಿಕೆ. ರವಿವಾರ ಪ್ರಕಟಗೊಂಡ ಮಾಹಿತಿ ಪ್ರಕಾರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳಿಗೆ ಅಗತ್ಯವಾಗಿರುವ ಎಚ್-1ಬಿ ವೀಸಾ ನೀಡುವ ಪ್ರಮಾಣ ಹೆಚ್ಚಿಸುವ ಮತ್ತು ದೇಶಗಳಿಗೆ ವಿಧಿಸಲಾಗಿರುವ ಮಿತಿ ಪ್ರಮಾಣ ತೆಗೆದುಹಾಕುವ ಬಗ್ಗೆ ಮಾತುಗಳು ಬೈಡೆನ್ ಕ್ಯಾಂಪಿನಿಂದ ಬಂದಿವೆ. ಮಾತ್ರವಲ್ಲದೆ 5 ಲಕ್ಷ ಭಾರತೀಯರಿಗೆ ಪೌರತ್ವ ನೀಡುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ.
ಜಮ್ಮು ಮತ್ತು ಕಾಶ್ಮೀರದೊಳಕ್ಕೆ ಉಗ್ರರನ್ನು ನುಗ್ಗಿಸಿ ರಕ್ತ ಹರಿಸುತ್ತಿರುವ ಪಾಕಿಸ್ಥಾನದ ಬಗ್ಗೆ ಬೈಡೆನ್ ಆಡಳಿತ ಕಠಿನ ಧೋರಣೆ ತಳೆಯಲೇಬೇಕು. ಈ ನಿಟ್ಟಿನಲ್ಲಿ ಟ್ರಂಪ್ ಸರಕಾರ ಹೊಂದಿರುವ ನಿಲುವನ್ನೇ ಮುಂದುವರಿಸುವಂತೆ ಮಾಡುವುದು ಕೇಂದ್ರ ಸರಕಾರದ ಮುತ್ಸದ್ಧಿತನಕ್ಕೆ ಪರೀಕ್ಷೆಯೂ ಆದೀತು. ಏನೇ ಇರಲಿ, ಎರಡೂ ದೇಶಗಳ ನಡುವಿನ ಬಾಂಧವ್ಯ ಈಗಾಗಲೇ ಹತ್ತಿರವಾಗಿದೆ. ಮುಂದಿನ ದಿನಗಳಲ್ಲಿ ಅದು ಮತ್ತಷ್ಟು ವೃದ್ಧಿಸಲಿ.