ರಿಯಾದ್: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಗಲ್ಫ್ ಸಹಕಾರ ಮಂಡಳಿ(ಜಿಸಿಸಿ)ಯ ಪ್ರಧಾನ ಕಾರ್ಯದರ್ಶಿ ನಯೆಫ್ ಫಲಾಹ್ ಮುಬಾರಕ್ ಅಲ್-ಹಜ್ರಾಫ್ ಅವರನ್ನು ಭೇಟಿಯಾದರು.
ಈ ವೇಳೆ ಭಾರತ ಮತ್ತು ಗಲ್ಫ್ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಿದರು.
ಮೂರು ದಿನಗಳ ಭೇಟಿ ಹಿನ್ನೆಲೆಯಲ್ಲಿ ಜೈಶಂಕರ್ ಅವರು ಶನಿವಾರ ಸೌದಿ ಅರೇಬಿಯಾಗೆ ಆಗಮಿಸಿದರು. ವಿದೇಶಾಂಗ ಸಚಿವರಾಗಿ ಸೌದಿಗೆ ಜೈಶಂಕರ್ ಅವರ ಮೊದಲ ಭೇಟಿಯಾಗಿದೆ.
ಭೇಟಿ ವೇಳೆ ಉಭಯ ನಾಯಕರು ಪ್ರಸ್ತುತ ಪ್ರದೇಶಿಕ ಮತ್ತು ಜಾಗತಿಕ ಪರಿಸ್ಥಿತಿ ಹಾಗೂ ಈ ಸಂದರ್ಭದಲ್ಲಿ ಭಾರತ-ಜಿಸಿಸಿ ಸಹಕಾರದ ಪ್ರಸ್ತುತತೆ ಕುರಿತು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.
ಜಿಸಿಸಿ ಎಂಬುದು ಬಹ್ರೇನ್, ಕುವೈತ್, ಒಮನ್, ಕತಾರ್, ಸೌದಿ ಅರಿಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಒಳಗೊಂಡ ಒಂದು ಪ್ರದೇಶಿಕ, ಅಂತರ್‌ಸರ್ಕಾರಿ, ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದೆ.