ಅಥೆನ್ಸ್ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಅಥೆನ್ಸ್‌ನಲ್ಲಿ ಗ್ರೀಸ್ ಅಧ್ಯಕ್ಷೆ ಕಟೆರಿನಾ ಎನ್. ಸಕೆಲ್ಲರೊಪೌಲೌ ಅವರು ”ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್” ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಭಾರತೀಯ ಸಮುದಾಯ ಅಥೆನ್ಸ್‌ನಲ್ಲಿ ಪ್ರಧಾನಿ ಮೋದಿಯವರಿಗೆ ಗ್ರೀಕ್ ಶಿರಸ್ತ್ರಾಣವನ್ನು ಉಡುಗೊರೆಯಾಗಿ ನೀಡಿ, ಆತ್ಮೀಯ ಸ್ವಾಗತವನ್ನು ನೀಡಿದರು.
“ನಮ್ಮ ಸಂಬಂಧಗಳು ಪುರಾತನವಾದದ್ದು ಮತ್ತು ಬಲವಾದ ಅಡಿಪಾಯ ಹೊಂದಿವೆ. ನನಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ನೀಡಿ ಗೌರವಿಸಿದ್ದಕ್ಕಾಗಿ ಹೆಲೆನಿಕ್ ಗಣರಾಜ್ಯದ ಜನರಿಗೆ ಮತ್ತು ಅಧ್ಯಕ್ಷರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾನು ಇದನ್ನು 140 ಕೋಟಿ ಭಾರತೀಯರ ಪರವಾಗಿ ಸ್ವೀಕರಿಸಿದ್ದೇನೆ ಮತ್ತು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ” ಎಂದರು.
“ಭಾರತ- ಯುರೋಪಿಯನ್ ಯೂನಿಯನ್ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದಕ್ಕೆ ಗ್ರೀಸ್ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಉಕ್ರೇನ್ ವಿಷಯದ ಬಗ್ಗೆ, ಎರಡೂ ದೇಶಗಳು ರಾಜತಾಂತ್ರಿಕತೆ ಮತ್ತು ಮಾತುಕತೆಯನ್ನು ಬೆಂಬಲಿಸುತ್ತವೆ. ಯುಎನ್ ಮತ್ತು ಇತರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗ್ರೀಸ್‌ನ ಸಹಕಾರಕ್ಕಾಗಿ, ಭಾರತದ G20 ಅಧ್ಯಕ್ಷ ಸ್ಥಾನಕ್ಕೆ ಅವರ ಶುಭಾಶಯಗಳು ಮತ್ತು ಪ್ರೋತ್ಸಾಹಕ್ಕಾಗಿ ನಾನು ಗ್ರೀಕ್ ಪ್ರಧಾನಿಗೆ ಧನ್ಯವಾದ ಹೇಳುತ್ತೇನೆ” ಎಂದರು.
ಗ್ರೀಸ್ ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲೌ ಅವರನ್ನು ಭೇಟಿ ಮಾಡಿ ,ಭಾರತ-ಗ್ರೀಸ್ ಸ್ನೇಹವನ್ನು ಬಲಪಡಿಸುವ ಹಲವಾರು ವಿಷಯಗಳನ್ನು ನಾವು ಚರ್ಚಿಸಿದ್ದೇವೆ. ನಾವು ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸುವ ಮಾರ್ಗಗಳನ್ನು ಸಹ ಚರ್ಚಿಸಿದ್ದೇವೆ. ಚಂದ್ರಯಾನ-3 ರ ಯಶಸ್ಸಿಗೆ ಅವರು ಭಾರತವನ್ನು ಅಭಿನಂದಿಸಿದ್ದಾರೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತದ ಪ್ರಧಾನಿಯೊಬ್ಬರು 40 ವರ್ಷಗಳ ಬಳಿಕ ಗ್ರೀಸ್ ಗೆ ಅಧಿಕೃತ ಭೇಟಿ ನೀಡಿದಂತಾಗಿದೆ.
ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಯವರ ಆಹ್ವಾನವನ್ನು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಸ್ವೀಕರಿಸಿದ್ದಾರೆ.