Advertisement

ಪುರುಷರ ಹಾಕಿಯಲ್ಲಿ ರಜತ; ಆಸ್ಟ್ರೇಲಿಯ ವಿರುದ್ಧ ಫೈನಲ್‌ನಲ್ಲಿ ಭಾರತಕ್ಕೆ 7-0 ಸೋಲು

09:41 PM Aug 08, 2022 | Team Udayavani |

ರ್ಮಿಂಗ್‌ಹ್ಯಾಮ್‌: ಸೋಮವಾರ ನಡೆದ ಪುರುಷರ ಹಾಕಿ ಫೈನಲ್‌ನಲ್ಲಿ ಚಾಂಪಿಯನ್ನರ ಆಟವಾಡಲು ವಿಫ‌ಲವಾದ ಭಾರತದ ಪುರುಷರ ಹಾಕಿ ತಂಡ ಆಸ್ಟ್ರೇಲಿಯನ್ನರ ಅಬ್ಬರಕ್ಕೆ ತತ್ತರಿಸಿತು. ಏಕಪಕ್ಷೀಯ ಪಂದ್ಯದಲ್ಲಿ 0-7 ಅಂತರದ ಹೀನಾಯ ಸೋಲುಂಡು ಬೆಳ್ಳಿಗೆ ಸಮಾಧಾನಪಟ್ಟಿತು.

Advertisement

ಆಸ್ಟ್ರೇಲಿಯ ಪರ ಬ್ಲೇಕ್‌ ಗೋವರ್, ನಥನ್‌ ಇಫ್ರಾಮ್ಸ್‌, ಜೇಕಬ್‌ ಆ್ಯಂಡರ್ಸನ್‌, ಟಾಮ್‌ ವಿಕ್‌ಹ್ಯಾಮ್‌ ಮತ್ತು ಫಿನ್‌ ಒಗಿಲ್ವಿ ಗೋಲುಗಳ ಸುರಿಮಳೆಗೈದರು. 8ನೇ ಗೋಲು “ರೂಲ್ಡ್‌ ಔಟ್‌’ ಎನಿಸಿತು. ಮನ್‌ಪ್ರೀತ್‌ ಸಿಂಗ್‌ ಪಡೆ ಅಸಹಾಯಕವಾಗಿ ಇದನ್ನೆಲ್ಲ ನೋಡುತ್ತ ಉಳಿಯಿತು. ಒಂದೂ ಗೋಲು ಹೊಡೆಯಲು ಸಾಧ್ಯವಾಗದಿದ್ದುದು ಭಾರತೀಯ ಹಾಕಿಯ ದುರಂತವೆನಿಸಿತು.

ಮೊದಲ ಕ್ವಾರ್ಟರ್‌ನಲ್ಲಿ 2-0, ಅರ್ಧ ಹಾದಿ ಕ್ರಮಿಸುವಾಗ 5-0 ಮುನ್ನಡೆ ಹೊಂದಿದ ಆಸ್ಟ್ರೇಲಿಯ, ಭಾರತದ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿತು. ಕಾಂಗರೂಗಳ ಈ ಬಿಗಿಯಾದ ಹಿಡಿತದಿಂದ ತಪ್ಪಿಸಿಕೊಳ್ಳಲು ಮನ್‌ಪ್ರೀತ್‌ ಬಳಗಕ್ಕೆ ಕೊನೆಯ ತನಕವೂ ಸಾಧ್ಯವಾಗಲಿಲ್ಲ.

ಭಾರತಕ್ಕೆ ಗೋಲು ಸಿಡಿಸುವ ಏಕೈಕ ಅವಕಾಶ ಲಭಿಸಿದ್ದು 24ನೇ ನಿಮಿಷದಲ್ಲಿ. ಆದರೆ ಆಕಾಶ್‌ದೀಪ್‌ ಸಿಂಗ್‌ ಅವರ ರಿವರ್ಸ್‌ ಹಿಟ್‌ ಅನ್ನು ಆಸ್ಟ್ರೇಲಿಯದ ಗೋಲಿ ಚಾರ್ಟರ್‌ ಯಶಸ್ವಿಯಾಗಿ ತಡೆದರು. 1998ರಲ್ಲಿ ಮೊದಲ ಸಲ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಹಾಕಿಯನ್ನು ಅಳವಡಿಸಿದ ಬಳಿಕ ಆಸ್ಟ್ರೇಲಿಯವೇ ಬಂಗಾರ ಗೆಲ್ಲುತ್ತ ಬಂದಿದೆ. ಕಾಂಗರೂಗಳ ಪ್ರಭುತ್ವವನ್ನು ಕೊನೆಗಾಣಿಸಲು ಈವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.

ಅಂದಹಾಗೆ ಇದು ಕಾಮನ್‌ವೆಲ್ತ್‌ ಗೇಮ್ಸ್‌ ಫೈನಲ್‌ನಲ್ಲಿ ಆಸ್ಟ್ರೇಲಿಯದ ಕೈಯಲ್ಲಿ ಭಾರತ ಅನುಭವಿಸಿದ 3ನೇ ಸೋಲು. ಇದಕ್ಕೂ ಮೊದಲು 2010 ಮತ್ತು 2014ರಲ್ಲೂ ಮುಗ್ಗರಿಸಿತ್ತು. 2010ರ ತವರಿನ ಕೂಟದಲ್ಲಂತೂ (ನವದೆಹಲಿ) ಭಾರತ 0-8 ಅಂತರದ ದೊಡ್ಡ ಸೋಲನ್ನು ಹೊತ್ತುಕೊಂಡಿತ್ತು.

Advertisement

ಮನ್‌ಪ್ರೀತ್‌ಗೆ ಏಟು: ದ್ವಿತೀಯ ಕ್ವಾರ್ಟರ್‌ ವೇಳೆ ನಾಯಕ ಮನ್‌ಪ್ರೀತ್‌ ಸಿಂಗ್‌ ಆಸೀಸ್‌ ಆಟಗಾರನಿಗೆ ಢಿಕ್ಕಿ ಹೊಡೆದದ್ದು ಕೂಡ ಭಾರತದ ಹಿನ್ನಡೆಗೆ ಕಾರಣ. ಗಾಯಾಳಾದ ಅವರು ಕೊನೆಯ 2 ಕ್ವಾರ್ಟರ್‌ಗಳಲ್ಲಿ ಆಡಲಿಳಿಯಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next