Advertisement

ಭಾರತ ಪೂರ್ಣ ಶಟ್‌ಡೌನ್‌

09:53 AM Mar 28, 2020 | mahesh |

ಹೊಸದಿಲ್ಲಿ: ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಎಲ್ಲ ರಾಜ್ಯಗಳು ಸೋಮವಾರ ಸಂಪೂರ್ಣ ಶಟ್‌ಡೌನ್‌ ಘೋಷಿಸಿವೆ. ಒಂದು ವೇಳೆ ಈ ಲಾಕ್‌ಡೌನ್‌ ಅನ್ನು ಉಲ್ಲಂಘಿಸಿದರೆ ಕಠಿನ ಶಿಕ್ಷೆ ಪಕ್ಕಾ ಎಂದು ಆಯಾ ರಾಜ್ಯ ಸರಕಾರಗಳು ಎಚ್ಚರಿಕೆ ನೀಡಿವೆ. ಪ್ರಧಾನಿ ಮೋದಿ ಅವರು ಜನರ ಎಗ್ಗಿಲ್ಲದ ಓಡಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದ ಅನಂತರ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಕಠಿನ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ ಬೆನ್ನಲ್ಲೇ ವಿವಿಧ ರಾಜ್ಯಗಳು ಈ ಕ್ರಮ ತೆಗೆದುಕೊಂಡಿವೆ. ಶಟ್‌ಡೌನ್‌ ಉಲ್ಲಂಘಿಸಿದರೆ 6 ತಿಂಗಳು ಜೈಲುವಾಸ ಅಥವಾ 1 ಸಾವಿರ ರೂ. ದಂಡ ಅಥವಾ ಇವೆರಡೂ ಶಿಕ್ಷೆ ವಿಧಿಸಲಾಗುತ್ತದೆ. ಈ ಮಧ್ಯೆ ದೇಶಾದ್ಯಂತ ಕೋವಿಡ್-19ಗೆ ಸಾವನ್ನಪ್ಪಿದವರ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, ಕೋಲ್ಕತಾ ಮತ್ತು ಹಿಮಾಚಲ ಪ್ರದೇಶದಲ್ಲಿ ಹೊಸದಾಗಿ ತಲಾ ಒಂದು ಪ್ರಕರಣ ಪತ್ತೆಯಾಗಿದೆ.

Advertisement

490 ಪ್ರಕರಣ ದೃಢ
ದೇಶಾದ್ಯಂತ ಒಟ್ಟಾರೆಯಾಗಿ 490 ಪ್ರಕರಣಗಳು ದೃಢಪಟ್ಟಿವೆ. ಕೇರಳವೊಂದರಲ್ಲೇ ಸೋಮವಾರ 28 ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿ ಒಟ್ಟಾರೆ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಅತ್ತ ಮಹಾರಾಷ್ಟ್ರದಲ್ಲೂ ಏರಿಕೆಯಾಗಿದ್ದು, ಒಟ್ಟಾರೆ ಸಂಖ್ಯೆ 97ಕ್ಕೆ ಏರಿದೆ. ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್‌ನಲ್ಲೂ ಸೋಂಕುಪೀಡಿತರ ಸಂಖ್ಯೆ ಹೆಚ್ಚಾಗಿದೆ.

ದೇಶೀಯ ವಿಮಾನಯಾನ ರದ್ದು
ದೇಶದಲ್ಲಿ ರೈಲು, ಸಾರಿಗೆ ವ್ಯವಸ್ಥೆ ರದ್ದುಗೊಂಡ ಬೆನ್ನಲ್ಲೇ ದೇಶೀಯ ವಿಮಾನಯಾನವನ್ನೂ
ಸಂಪೂರ್ಣವಾಗಿ ರದ್ದು ಮಾಡುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಘೋಷಣೆ ಮಾಡಿದೆ. ಮಾ. 25ರ ಮಧ್ಯರಾತ್ರಿ 12 ಗಂಟೆಯಿಂದ ಇದು ಜಾರಿಗೆ ಬರಲಿದೆ. ಕಾರ್ಗೋ ವಿಮಾನಗಳು ಕಾರ್ಯಾಚರಿಸಲಿವೆ.

ಗಂಭೀರವಾಗಿ ಪರಿಗಣಿಸಿ: ಮೋದಿ ಮನವಿ
ಜನತಾ ಕರ್ಫ್ಯೂ ಅನಂತರ, ದೇಶದ ಹಲವಾರು ರಾಜ್ಯಗಳು ಲಾಕ್‌ಡೌನ್‌ ಘೋಷಣೆ ಮಾಡಿದರೂ ಜನ ಓಡಾಡಿದ್ದರ ಬಗ್ಗೆ ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. “ನಮ್ಮಲ್ಲಿ ಅನೇಕರು ಲಾಕ್‌ಡೌನ್‌ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ, ನಿಮ್ಮ ಕುಟುಂಬವನ್ನು ಕಾಪಾಡಿ, ಸರಕಾರದ ಆದೇಶಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ’ ಎಂದು ಮೋದಿ ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.

ಸುಪ್ರೀಂ ಭಾಗಶಃ ಬಂದ್‌
ಕೊರೊನಾ ಬಿಸಿ ಸುಪ್ರೀಂ ಕೋರ್ಟ್‌ಗೂ ತಟ್ಟಿದೆ. ಮಂಗಳವಾರದಿಂದ ಕೇವಲ ದ್ವಿಸದಸ್ಯ ಪೀಠ ಮಾತ್ರ ಅತ್ಯಂತ ತುರ್ತು ಅರ್ಜಿಗಳ ವಿಚಾರಣೆ ನಡೆಸಲಿದೆ. ಉಳಿದಂತೆ ಆವರಣದ ವಕೀಲರ ಕಚೇರಿಯನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಅವಧಿಯಲ್ಲಿ ಯಾವುದೇ ಮೊಕದ್ದಮೆಯ ವೈಯಕ್ತಿಕ ಮತ್ತು ನೇರ ವಿಚಾರಣೆಯನ್ನು ಮಾಡುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

Advertisement

ತಿಹಾರ್‌ ಜೈಲಿನಿಂದ 3 ಸಾವಿರ ಕೈದಿಗಳ ಬಿಡುಗಡೆ
ಕೋವಿಡ್-19 ಹಿನ್ನೆಲೆಯಲ್ಲಿ ಹೊಸದಿಲ್ಲಿಯ ತಿಹಾರ್‌ ಜೈಲಿನಲ್ಲಿರುವ 3,000 ಕೈದಿಗಳನ್ನು ಬಿಡುಗಡೆ ಮಾಡಲು ದಿಲ್ಲಿ ಸರಕಾರ ನಿರ್ಧರಿಸಿದೆ. ಜೈಲಿನಲ್ಲಿ ವೈರಸ್‌ ವ್ಯಾಪಕವಾಗಿ ಹರಡಬಾರದು ಎಂಬ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.  1,500 ಅಪರಾಧಿಗಳನ್ನು ಪೆರೋಲ್‌, ಜಾಮೀನಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ವಿಚಾರಣಾಧೀನ ಕೈದಿಗಳನ್ನು ಮಧ್ಯಾಂತರ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.

14 ಲಕ್ಷ ಕೋಟಿ ರೂಪಾಯಿ ನಷ್ಟ
ಕೋವಿಡ್-19 ಭೀತಿಯಿಂದಾಗಿ ಜಗತ್ತಿನ ನಾನಾ ಷೇರು ಮಾರುಕಟ್ಟೆಗಳು ಕುಸಿತ ಕಂಡಿದ್ದು, ಇದರ ಪರಿಣಾಮ ಮುಂಬಯಿ ಷೇರುಪೇಟೆ ಮೇಲೂ ಉಂಟಾಗಿದೆ. ಸೋಮವಾರ ಒಂದೇ ದಿನ 4,000 ಅಂಕಗಳಷ್ಟು ಕುಸಿತವಾಗಿದ್ದು, ಹೂಡಿಕೆದಾರರ ಸುಮಾರು 14 ಲಕ್ಷ ಕೋಟಿ ರೂ. ನಷ್ಟವಾಯಿತು. ನಿಫ್ಟಿ ಸೂಚ್ಯಂಕದಲ್ಲೂ ಭಾರೀ ಕುಸಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next