Advertisement
4 ದಿನಗಳ ಭಾರತ ಪ್ರವಾಸ ಆರಂಭಿಸಿರುವ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ದ್ವಿಪಕ್ಷೀಯ ಮಾತುಕತೆಯ ಬಳಿಕ, ಅವರ ಸಮ್ಮುಖದಲ್ಲೇ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಎರಡೂ ದೇಶಗಳ ಸಶಸ್ತ್ರ ಪಡೆಗಳ ನಡುವೆ ಪರಸ್ಪರ ಲಾಜಿಸ್ಟಿಕ್ ಸಹಕಾರ, ರಹಸ್ಯ ಅಥವಾ ಸಂರಕ್ಷಿತ ದಾಖಲೆಗಳಿಗೆ ಭದ್ರತೆ ನೀಡುವ ಒಪ್ಪಂದವೂ ಇವುಗಳಲ್ಲಿ ಸೇರಿದೆ. ಫ್ರಾನ್ಸ್‌ನಿಂದ ತರಿಸಲಾಗುತ್ತಿರುವ ರಫೇಲ್ ಯುದ್ಧವಿಮಾನಗಳ ಕುರಿತು ವಿವಾದ ಎದ್ದಿರುವಂತೆಯೇ ಇಂತಹುದೊಂದು ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.ಮಾತುಕತೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ರಕ್ಷಣಾ ಸಹಕಾರವು ಅತ್ಯಂತ ಬಲಿಷ್ಠವಾಗಿದ್ದು, ಹೆಚ್ಚು ವಿಶ್ವಾಸಾರ್ಹ ರಕ್ಷಣಾ ಪಾಲುದಾರ ರಾಷ್ಟ್ರಗಳ ಪೈಕಿ ಫ್ರಾನ್ಸ್ ಕೂಡ ಒಂದು ಎಂದು ಹೇಳಿದ್ದಾರೆ. ಸಶಸ್ತ್ರಪಡೆಗಳ ನಡುವಿನ ಸಹಕಾರವು ರಕ್ಷಣಾ ಸಂಬಂಧದಲ್ಲಿ ಸುವರ್ಣ ಹೆಜ್ಜೆ ಎಂದೂ ಅವರು ಬಣ್ಣಿಸಿದ್ದಾರೆ. ಇದೇ ವೇಳೆ ಮಾತನಾಡಿದ ಮ್ಯಾಕ್ರನ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಎರಡೂ ದೇಶಗಳು ಬದ್ಧವಾಗಿರಲಿದೆ ಎಂದಿದ್ದಾರೆ. ಜತೆಗೆ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲೂ ಉಭಯ ದೇಶಗಳು ಜತೆಯಾಗಿರಲಿವೆ ಎಂದಿದ್ದಾರೆ ಮ್ಯಾಕ್ರನ್.
Related Articles
Advertisement
ಸ್ಪೈಸ್‌ಜೆಟ್ ಭಾರೀ ಮೊತ್ತದ ಡೀಲ್ವಿಮಾನಯಾನ ಕ್ಷೇತ್ರದಲ್ಲೇ ಅತಿ ದೊಡ್ಡ ಒಪ್ಪಂದವೊಂದನ್ನು ಸ್ಪೈಸ್ ಜೆಟ್ ಶನಿವಾರ ಫ್ರಾನ್ಸ್‌ನ ಸ್ಯಾಫ್ರಾನ್ ಗ್ರೂಪ್‌ನೊಂದಿಗೆ ಮಾಡಿ ಕೊಂಡಿದೆ. ಸಿಎಫ್ಎಂ ಏರ್‌ಕ್ರಾಫ್ಟ್ ಎಂಜಿನ್‌ಗೆ ಸಂಬಂಧಿಸಿದ ಒಪ್ಪಂದ ಇದಾಗಿದ್ದು, ಈ ಡೀಲ್‌ನ ಮೊತ್ತವು 80 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು ಎಂದು ಕಂಪನಿ ತಿಳಿಸಿದೆ. 155 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳಿಗೆ ಲೀಪ್-1ಬಿ ಎಂಜಿನ್ ಖರೀದಿಸುವ ಒಪ್ಪಂದ ಇದಾಗಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲೂ ಸಹಕಾರ ಸಾಧಿಸುವ ನಿಟ್ಟಿನಲ್ಲಿ ಭಾರತ-ಫ್ರಾನ್ಸ್ ಹೆಜ್ಜೆಯಿಟ್ಟಿದೆ. ಕೆಲ ಪ್ರಮುಖ ಪ್ರದೇಶಗಳಲ್ಲಿ ನೌಕೆಗಳ ಪತ್ತೆ, ಗುರುತಿಸುವಿಕೆ ಮತ್ತು ನಿಗಾಗೆ ಸಂಬಂಧಿಸಿ ಇಸ್ರೋ ಮತ್ತು ಸಿಎನ್‌ಇಎಸ್ ಒಪ್ಪಂದ ಮಾಡಿಕೊಂಡಿವೆ. ಜತೆಗೆ, ಜೈತಾಪುರ ಅಣುಶಕ್ತಿ ಸ್ಥಾವರದ ಕೆಲಸ ತ್ವರಿತಗೊಳಿಸುವ ಕುರಿತೂ ಮಾತುಕತೆ ನಡೆಸಲಾಗಿದೆ. ಇದೇ ವೇಳೆ, ಅವಶ್ಯಕ ಸಂದರ್ಭಗಳಲ್ಲಿ ಪರಸ್ಪರರ ಸೇನಾ ನೆಲೆ ಬಳಸಿಕೊಳ್ಳುವ ಬಗ್ಗೆಯೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ವಿಸ್ತರಣಾ ಮನೋಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಒಪ್ಪಂದ ಮಹತ್ವ ಪಡೆದಿದೆ. ಮೋದಿ ಅಪ್ಪುಗೆಯ ಸ್ವಾಗತ
ಶುಕ್ರವಾರ ರಾತ್ರಿ, ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಹೊಸದಿಲ್ಲಿಗೆ ವಿಮಾನದಲ್ಲಿ ಬಂದಿಳಿದ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಖುದ್ದು ಪ್ರಧಾನಿ ಮೋದಿಯವರೇ ಆತ್ಮೀಯವಾಗಿ ಸ್ವಾಗತಿಸಿದರು. ಎಂದಿನಂತೆ, ಮೋದಿಯವರ ಅಪ್ಪುಗೆಯ ಸ್ವಾಗತ, ಮ್ಯಾಕ್ರನ್ ಅವರನ್ನು ಖುಷಿಪಡಿಸಿತು. ಆನಂತರ, ಟ್ವಿಟರ್‌ನಲ್ಲಿಯೂ ಮ್ಯಾಕ್ರನ್ ಅವರಿಗೆ ಸ್ವಾಗತ ಕೋರಿದ ಮೋದಿ, ಮ್ಯಾಕ್ರನ್ ಭೇಟಿ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ಎಂದು ಬಣ್ಣಿಸಿದರು. ಇತ್ತೀಚೆಗಷ್ಟೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡ್ನೂ ಭೇಟಿ ವೇಳೆ ಪ್ರಧಾನಿ ಮೋದಿ ಖುದ್ದು ಸ್ವಾಗತಿಸಿಲ್ಲ ಎಂಬ ವಿಚಾರ ಚರ್ಚೆಗೆ ಕಾರಣವಾಗಿತ್ತು.