Advertisement

ಭಾರತ ಪ್ರಾಚೀನ ಜ್ಞಾನ ಮರೆತಿದೆ

11:29 AM Aug 11, 2018 | Team Udayavani |

ಬೆಂಗಳೂರು: ಸಮಾಜ ಇಂದು ಭಾವನಾತ್ಮಕ ಬಿಕಟ್ಟು ಎದುರಿಸುತ್ತಿದ್ದು, ಈ ಬಿಕ್ಕಟ್ಟಿನಿಂದ ಹೊರಬರಲು ಆಧುನಿಕ ಭಾರತದಲ್ಲಿ ಪ್ರಾಚೀನ ಜ್ಞಾನವು ಶಿಕ್ಷಣದ ಭಾಗವಾಗಬೇಕು ಎಂದು ಟಿಬೆಟ್‌ನ ಧಾರ್ಮಿಕ ಗುರು ದಲೈ ಲಾಮಾ ಅಭಿಪ್ರಾಯಪಟ್ಟರು. ರಾಜ್ಯದಲ್ಲಿ ನೆಲೆಸಿರುವ ಟಿಬೆಟಿಯನ್ನರು ನಗರದ ಹೋಟೆಲ್‌ ಒಂದರಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಧನ್ಯವಾದ ಕರ್ನಾಟಕ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಭಾರತವು ತನ್ನ ಪ್ರಾಚೀನ ಜ್ಞಾನವನ್ನು ಮರೆತುಬಿಟ್ಟಿದೆ. ಇದರಿಂದ ಭಾವನಾತ್ಮಕ ಬಿಕ್ಕಟ್ಟು ಉಂಟಾಗಿದೆ. ಈ ಬಿಕ್ಕಟ್ಟು ಮನುಷ್ಯನನ್ನು ರಚನಾತ್ಮಕ ಮನಸ್ಥಿತಿಯಿಂದ ವಿನಾಶಕಾರಿ ಮನಸ್ಥಿತಿಯತ್ತ ಕೊಂಡೊಯ್ಯುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ಪ್ರಾಚೀನ ಜ್ಞಾನ ಕುರಿತ ಪಠ್ಯ ಅಳವಡಿಸಬೇಕು. ಆ ಮೂಲಕ ಪ್ರಾಚೀನ ಜ್ಞಾನವನ್ನು ಮರುಸ್ಥಾಪನೆ ಮಾಡಬೇಕು ಎಂದರು.

ಪ್ರಾಚೀನ ಜ್ಞಾನವನ್ನು ಒಳಗೊಂಡ ಶಿಕ್ಷಣವು ಮಕ್ಕಳಲ್ಲಿ ಆರೋಗ್ಯದ ಜತೆಗೆ ನಿರ್ಮಲ ಭಾವನೆಗಳನ್ನು ಬಿತ್ತುವಂತಿರಬೇಕು. ಜತೆಗೆ ಮನಶಾÏಸ್ತ್ರ, ತತ್ವಶಾಸ್ತ್ರ ಮತ್ತಿತರ ವಿಷಯಗಳನ್ನೂ ಒಳಗೊಂಡಿರಬೇಕು ಅಂದಾಗ, ಈ ಭಾವನಾತ್ಮಕ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯ ಎಂದರು.

ಭಾರತವು ಅಹಿಂಸೆ ಪ್ರತಿಪಾದಿಸುವ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಅದು ನಿಜವಾದ ಕರುಣೆಯಿಂದ ಕೂಡಿರುವಂತಹದ್ದು. ಆ ಸಂಸ್ಕೃತಿಯನ್ನು ಟಿಬೆಟ್‌ ಪೋಷಿಸಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಭಾರತ “ಗುರು’ವಾಗಿದ್ದರೆ, ಟಿಬೆಟ್‌ ಅದರ “ಚೇಲಾ’ ಆಗಿತ್ತು. ಆದರೆ, ಈಗ ಇದು ತಿರುವು-ಮುರುವು ಆಗಿದೆ ಎಂದು ಸೂಚ್ಯವಾಗಿ ಹೇಳಿದರು.

ನಿಜಲಿಂಗಪ್ಪ ಮೆಲುಕು: ಟಿಬೆಟ್‌ನ ಸಂಸ್ಕೃತಿ ಮತ್ತು ಶಿಕ್ಷಣವನ್ನು ಉಳಿಸಿ-ಬೆಳೆಸುವಲ್ಲಿ ಭಾರತದ ಪಾತ್ರ ಮಹತ್ತರವಾಗಿದೆ. 1956ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಟಿಬೆಟಿಯನ್ನರಿಗೆ ಆಶ್ರಯ ಕೊಟ್ಟರು. ನಂತರ ಟಿಬೆಟ್‌ ಕಾಲೊನಿ ಸ್ಥಾಪನೆಗೆ ಬೆಂಬಲಿಸಿದರು. ಅದೇ ರೀತಿ, ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಮುಂದೆಬಂದು, ಟಿಬೆಟ್‌ ನಿರಾಶ್ರಿತರಿಗೆ ಭೂಮಿ ಕೊಟ್ಟು, ಆಶ್ರಯ ನೀಡಿದರು. ಟಿಬೆಟ್‌ ಯಾವಾಗಲೂ ಭಾರತಕ್ಕೆ ಋಣಿಯಾಗಿದೆ ಎಂದು ಸ್ಮರಿಸಿದರು.

Advertisement

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ದಿವಂಗತ ಎಸ್‌. ನಿಜಲಿಂಗಪ್ಪ ಅವರು ಟಿಬೆಟಿಯನ್ನರಿಗೆ ಅಂದು ಆಶ್ರಯ ನೀಡಿದರು. ಈಗ ಟಿಬೆಟಿಯನ್ನರು ನಮ್ಮೊಳಗೆ ಒಬ್ಬರಾಗಿದ್ದಾರೆ. ಅವರದ್ದೇ ಆದ ಕೊಡುಗೆ ನೀಡುತ್ತಿದ್ದಾರೆ. ಸಂಸ್ಕೃತಿಗಳ ವಿನಿಮಯಕ್ಕೆ ಇದು ಅನುವು ಮಾಡಿಕೊಟ್ಟಿದೆ ಎಂದು ಬಣ್ಣಿಸಿದರು.

ಇದಕ್ಕೂ ಮೊದಲು ಕನ್ನಡ ಮತ್ತು ಟಿಬೆಟ್‌ ಸಂಸ್ಕೃತಿಯ ಸಮ್ಮಿಲನಕ್ಕೆ “ಧನ್ಯವಾದ ಕರ್ನಾಟಕ’ ವೇದಿಕೆಯಾಯಿತು. ಒಂದೆಡೆ ಕುವೆಂಪು ಅವರ “ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಹಾಡು, ಮತ್ತೂಂದೆಡೆ ಟಿಬೆಟ್‌ನ ಸಾಂಪ್ರದಾಯಿಕ ನೃತ್ಯ ಗಮನಸೆಳೆಯಿತು. ಕೇಂದ್ರ ಟಿಬೆಟ್‌ ಆಡಳಿತ ಅಧ್ಯಕ್ಷ ಡಾ.ಲೊಬ್ಸಂಗ್‌ ಸಿಂಘೆ, ಗಡಿಪಾರು ಟಿಬೆಟನ್‌ ಸಂಸತ್ತಿನ ಅಧ್ಯಕ್ಷ ಖೆಂಪೊ ಸೋನಂ ತೇಂಫೆಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next