ವಿಶ್ವಸಂಸ್ಥೆ : 2018ರಲ್ಲಿ ಭಾರತವು ವಿಶ್ವದ ಅತ್ಯಂತ ವೇಗದಲ್ಲಿ ಬೆಳೆಯುವ ಪ್ರಮುಖ ಆರ್ಥಿಕತೆ ಎನಿಸಿಕೊಳ್ಳಲಿದೆ ಎಂಬ ಭವಿಷ್ಯವಾಣಿಯನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ – ಐಎಂಎಫ್ – ಪುನರುಚ್ಚರಿಸಿದೆ. ಅಂತೆಯೇ ಭಾರತ 2018ರಲ್ಲಿ ಶೇ.7.4 ಜಿಡಿಪಿಯನ್ನು ಮತ್ತು 2019ರಲ್ಲಿ ಶೇ.7.8ರ ಜಿಡಿಪಿಯನ್ನು ದಾಖಲಿಸಲಿದೆ ಎಂದು ಐಎಂಎಫ್ ದೃಢತೆಯಿಂದ ಹೇಳಿದೆ.
ಭಾರತದ ಮಧ್ಯಮ ಅವಧಿಯ ಆರ್ಥಿಕ ಪ್ರಗತಿಯ ವೇಗವು ಹಾಲಿ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಧನಾತ್ಮಕವಾಗಿಯೇ ಮುಂದುವರಿಯಲಿದೆ ಎಂದು ಐಎಂಎಫ್ ಹೇಳಿದೆ.
ಭಾರತಕ್ಕೆ ಅಹ್ಲಾದಕರ ಎನಿಸುವ ಈ ವಿಷಯವನ್ನು ಐಎಂಎಫ್ ತನ್ನ ಏಶ್ಯ ಪೆಸಿಫಿಕ್ ರೀಜಿನಲ್ ಇಕಾನಮಿಕ್ ಔಟ್‌ಲುಕ್ ವರದಿಯಲ್ಲಿ ಬಹಿರಂಗ ಪಡಿಸಿದೆ.
ಭಾರತವು ನೋಟು ಅಮಾನ್ಯದ ಪ್ರತಿಕೂಲ ಪರಿಣಾಮಗಳಿಂದ ಈಗ ಚೇತರಿಸಿಕೊಂಡಿದೆ; ಹಾಗೆಯೇ ಜಿಎಸ್‌ಟಿ ಅನುಷ್ಠಾನದ ಬಾಲಗ್ರಹ ಪೀಡೆಯಿಂದಲೂ ಅದು ಮುಕ್ತವಾಗುತ್ತಿದೆ. ಭಾರತದ ಅತ್ಯಂತ ಸದೃಢ ಖಾಸಗಿ ಬಳಕೆದಾರಿಕೆಯ ಬಲದಲ್ಲಿ ದೇಶವು ನೋಟು ಅಮಾನ್ಯ ಮತ್ತು ಜಿಎಸ್‌ಟಿ ಬಾಲಗ್ರಹ ಪೀಡೆಯಿಂದ ಹೊರಬರಲು ಸಾಧ್ಯವಾಗಿದೆ ಎಂದು ಐಎಂಎಫ್ ವರದಿ ಹೇಳಿದೆ.
ದೇಶದ ಗ್ರಾಹಕ ವಸ್ತು ಹಣದುಬ್ಬರ ಬೆಲೆ ಸೂಚ್ಯಂಕವು ಶೇ.4ರ ಮಟ್ಟದಲ್ಲಿ, ಶೇ.2ರಷ್ಟು ಹೆಚ್ಚು ಅಥವಾ ಕಡಿಮೆ ವಲಯದಲ್ಲಿ, ಇರಬೇಕೆಂಬ ಆರ್‌ಬಿಐ ಯೋಜನೆ ಪ್ರಕಾರವೇ ಹಣದುಬ್ಬರ ಇರಲಿದೆ ಎಂದು ಐಎಂಎಫ್ ವರದಿ ವಿಶ್ವಾಸ ವ್ಯಕ್ತಪಡಿಸಿದೆ.
ಆದರೂ ಐಎಂಎಫ್ ಭಾರತಕ್ಕೆ ಒಂದು ಎಚ್ಚರಿಕೆ ನೀಡಿದೆ: ಹಣದುಬ್ಬರ ಒತ್ತಡ ಹೆಚ್ಚುತ್ತಿರುವ ಕಾರಣ ಆರ್‌ಬಿಐ ತನ್ನ ಹಣಕಾಸು ನೀತಿಯನ್ನು ಬಿಗಿಯಾಗಿ ಇರಿಸಿಕೊಳ್ಳುವ ಅಗತ್ಯವಿದೆ ಎಂದು ಐಎಂಎಫ್ ಹೇಳಿದೆ.