ನವದೆಹಲಿ:ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಹಾರಾಟವನ್ನು ನವೆಂಬರ್ 30ರವರೆಗೆ ರದ್ದುಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಬುಧವಾರ(ಅಕ್ಟೋಬರ್ 28, 2020) ತಿಳಿಸಿದೆ.
ಸಂದರ್ಭಾನುಸಾರವಾಗಿ ಆಯ್ದ ಮಾರ್ಗಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅಧಿಕಾರಿಗಳು ಅವಕಾಶ ನೀಡಲಿದ್ದಾರೆ ಎಂದು ಭಾರತೀಯ ನಾಗರಿಕ ವಿಮಾನಯಾನ ಪ್ರಾಧಿಕಾರ ಪ್ರಕಟಣೆಯಲ್ಲಿ ವಿವರಿಸಿದೆ.
26/06/2020ರಂದು ಹೊರಡಿಸಿದ್ದ ಪ್ರಕಟಣೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರ ಸೇವೆಯ ವಿಮಾನ ಯಾನ ಹಾರಾಟ ರದ್ದುಗೊಳಿಸಿರುವ ಅವಧಿಯನ್ನು 2020ರ ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ಆದರೆ ಈ ನಿರ್ಬಂಧ ಅಂತಾರಾಷ್ಟ್ರೀಯ ಕಾರ್ಗೋ(ಸರಕು ಸಾಗಾಟ) ವಿಮಾನ ಮತ್ತು ಡಿಜಿಸಿಎ ಅನುಮತಿ ಮೇರೆಗೆ ಹಾರಾಟ ನಡೆಸುವ ವಿಶೇಷ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ:ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ:ಗೈಡ್ ಲೈನ್ಸ್ ನಲ್ಲಿ ಏನಿದೆ?
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ 23ರಿಂದಲೇ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಭಾರತ ರದ್ದುಪಡಿಸಿತ್ತು. ಆದರೆ ಮೇ ತಿಂಗಳಿನಿಂದ ವಿಶೇಷ ಅಂತಾರಾಷ್ಟ್ರೀಯ ವಿಮಾನ “ವಂದೇ ಭಾರತ್ ಮಿಷನ್” ಕಾರ್ಯಾಚರಿಸುತ್ತಿದೆ.ಜುಲೈ ತಿಂಗಳಿನಿಂದ ಆಯ್ದ ದೇಶಗಳೊಂದಿಗೆ ದ್ವಿಪಕ್ಷೀಯ “ಏರ್ ಬಬ್ಬಲ್” ವ್ಯವಸ್ಥೆಯಡಿ ಪ್ರಯಾಣಿಕರನ್ನು ಕರೆ ತರಲಾಗುತ್ತಿದೆ ಎಂದು ವರದಿ ವಿವರಿಸಿದೆ.