ಹೊಸದಿಲ್ಲಿ : ಚೀನಾದ ಕಲುಷಿತ ರಸಗೊಬ್ಬರಗಳ ಬಳಕೆಯನ್ನು ಶ್ರೀಲಂಕಾ ತಡೆಹಿಡಿದ ಬಳಿಕ, ಭಾರತವು 1,00,000 ಕೆಜಿ ನ್ಯಾನೊ ಸಾರಜನಕ ಗೊಬ್ಬರವನ್ನು ಕಳುಹಿಸಿದೆ.
ಚೀನಾದ ಸಾವಯವ ಗೊಬ್ಬರವು ಬ್ಯಾಕ್ಟೀರಿಯಾದಿಂದ ಕಲುಷಿತವಾಗಿದೆ ಎಂದು ಕಂಡುಬಂದ ಹಿನ್ನಲೆಯಲ್ಲಿ ಅದನ್ನು ಹಡಗಿನಿಂದ ಇಳಿಸುವುದನ್ನು ಶ್ರೀಲಂಕಾ ನಿರ್ಬಂಧಿಸಿತ್ತು.
ಶ್ರೀಲಂಕಾದ ಎರಡನೇ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿರುವ ಪೀಪಲ್ಸ್ ಬ್ಯಾಂಕ್ ಆಫ್ ಶ್ರೀಲಂಕಾವನ್ನು ಕ್ವಿಡ್ ಪ್ರೊ ಕ್ವೋ ಕ್ರಮದಲ್ಲಿ ಕಪ್ಪುಪಟ್ಟಿಗೆ ಸೇರಿಸಿದ ಬಳಿಕ ಈ ಬೆಳವಣಿಗೆ ಬೀಜಿಂಗ್ ಅನ್ನು ತೀವ್ರ ಅಸಮಾಧಾನಗೊಳಿಸಿದೆ.
ಶ್ರೀಲಂಕಾ ಸರ್ಕಾರದ ವಿನಂತಿಯ ಹಿನ್ನೆಲೆಯಲ್ಲಿ, ಗುರುವಾರ ಬೆಳಿಗ್ಗೆ ಎರಡು ಭಾರತೀಯ ವಾಯುಪಡೆಯ ಗ್ಲೋಬ್‌ಮಾಸ್ಟರ್ ವಿಮಾನಗಳಲ್ಲಿ ಭಾರತವು ರಸಗೊಬ್ಬರವ ನ್ನು ಶ್ರೀಲಂಕಾಕ್ಕೆ ತಲುಪಿಸಿದೆ.
“ಸಾವಯವ ಕೃಷಿಯತ್ತ ಶ್ರೀಲಂಕಾ ಸರ್ಕಾರದ ಉಪಕ್ರಮವನ್ನು ಬೆಂಬಲಿಸಲು ಮತ್ತು ಶ್ರೀಲಂಕಾದ ರೈತರಿಗೆ ನ್ಯಾನೊ ಸಾರಜನಕ ಗೊಬ್ಬರದ ಲಭ್ಯತೆಯನ್ನು ತ್ವರಿತವಾಗಿ ನೀಡಲು ಈ ಕ್ರಮ ಅಗತ್ಯವಾಗಿತ್ತು” ಎಂದು ಕೊಲಂಬೊದಲ್ಲಿನ ಭಾರತೀಯ ಹೈಕಮಿಷನ್ ಹೇಳಿದೆ.
ಪೀಪಲ್ಸ್ ಬ್ಯಾಂಕ್ ಅನ್ನು ಕಪ್ಪುಪಟ್ಟಿಗೆ ಸೇರಿಸಲು ಶ್ರೀಲಂಕಾದಲ್ಲಿನ ಚೀನಾ ರಾಯಭಾರ ಕಚೇರಿಯ ಆರ್ಥಿಕ ಮತ್ತು ವಾಣಿಜ್ಯ ಕಚೇರಿ ನಿರ್ಣಯ ತೆಗೆದುಕೊಂಡಿತ್ತು.