ನವದೆಹಲಿ: ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಈ ಹಿನ್ನಲೆಯಲ್ಲಿ ಜುಲೈ 15ರವರೆಗೆ ಅಂತಾರಾಷ್ಟ್ರೀಯ ವಿಮಾನ ಯಾನ ಸೇವೆಗಳನ್ನು ಪುನರಾರಂಭಿಸದಿರಲು ನಾಗರಿಕ ವಿಮಾನ ಯಾನ ನಿರ್ದೇಶನಾಲಯ ತೀರ್ಮಾನಿಸಿದೆ.
ಆದರೆ ಈ ನಿಷೇಧ ಅಂತಾರಾಷ್ಟ್ರೀಯ ಕಾರ್ಗೋ ಹಾಗೂ ಡಿಜಿಸಿಎ ಒಪ್ಪಿಗೆ ಇರುವ ವಿಮಾನ ಯಾನಗಳಿಗೆ ಅನ್ವಯಿಸುವುದಿಲ್ಲ.
ಹಲವಾರು ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳು ಭಾರತಕ್ಕೆ ವಿಮಾನ ಯಾನವನ್ನು ಪುನರಾರಂಭಿಸು ಇಚ್ಛೆಯನ್ನು ವ್ಯಕ್ತಪಡಿಸಿರುವ ಬೆನ್ನಲ್ಲೇ ಡಿಜಿಸಿಎಯಿಂದ ಈ ನಿರ್ದೇಶನ ಹೊರಬಿದ್ದಿದೆ.
ವಂದೇ ಭಾರತ್ ಮಿಷನ್ ನಡಿಯಲ್ಲಿ ಭಾರತ ವಿದೇಶಗಳಲ್ಲಿ ಸಿಲುಕಿಕೊಂಡಿರುವ ತನ್ನ ಪ್ರಜೆಗಳನ್ನು ಕರೆದುಕೊಂಡು ಬಂದಿರುವಂತೆ ತಮ್ಮ ವಿಮಾನಗಳಿಗೂ ದೇಶದಲ್ಲಿ ಇಳಿಯಲು ಅನುವು ಮಾಡಿಕೊಡಬೇಕೆಂದು ಅಮೆರಿಕಾ, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವಾರು ರಾಷ್ಟ್ರಗಳ ಸಂಬಂಧಿತ ಇಲಾಖೆಗಳು ಸಚಿವಾಲಯಕ್ಕೆ ಮನವಿಗಳನ್ನು ಸಲ್ಲಿಸಿದ್ದು ಇವುಗಳನ್ನೆಲ್ಲಾ ಪರಿಶೀಲಿಸಲಾಗುತ್ತಿದೆ ಎಂದು ಸಚಿವಾಲಯದ ಮಾಹಿತಿಗಳು ತಿಳಿಸಿವೆ.
ಮುಂಬಯಿಯಿಂದ ಪ್ಯಾರಿಸ್ ಗೆ ಹಾರಾಟ ನಡೆಸಬೇಕಿದ್ದ ಏರ್ ಇಂಡಿಯಾ ವಿಮಾನದ ಹಾರಾಟಕ್ಕೆ ಫ್ರಾನ್ಸ್ ಸರಕಾರ ಅಂತಿಮ ಕ್ಷಣದಲ್ಲಿ ಒಪ್ಪಿಗೆ ನಿರಾಕರಿಸಿತ್ತು ಮತ್ತಿದು ಹಲವು ಪ್ರಯಾಣಿಕರ ತೊಂದರೆಗೆ ಕಾರಣವಾಗಿತ್ತು.
ಇನ್ನೊಂದೆಡೆ ಹಲವಾರು ರಾಷ್ಟ್ರಗಳು ವಂದೇ ಭಾರತ್ ಮಿಷನ್ ಕೈಗೊಳ್ಳಲು ಬಾರತ ಮುಂಚಿತವಾಗಿಯೇ ಅನುಮತಿಯನ್ನು ಪಡೆದುಕೊಳ್ಳಬೇಕೆಂದು ಸೂಚಿಸಿರುವ ಹಿನ್ನಲೆಯಲ್ಲಿ ನಾಗರಿಕ ವಿಮಾನ ಯಾನ ಸಚಿವಾಲಯವು ಈ ನಿಟ್ಟಿನಲ್ಲಿ ಮಾತುಕತೆಯನ್ನು ನಡೆಸಿದೆ.