ಪೊಟ್ಚೇಫ್ ಸ್ಟ್ರೂಮ್: ಭಾರತ ವನಿತಾ ಅಂಡರ್ 19 ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಚೊಚ್ಚಲ ವನಿತಾ ಅಂಡರ್ 19 ಕ್ರಿಕೆಟ್ ವಿಶ್ವಕಪ್ ಕೂಟದ ಫೈನಲ್ ತಲುಪಿದೆ. ಸೆಮಿ ಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿದ ಶಫಾಲಿ ವರ್ಮಾ ಪಡೆ ಮೊದಲ ಫೈನಲ್ ಪ್ರವೇಶ ಮಾಡಿತು.
ಇಂದಿನ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡ ಬ್ಲ್ಯಾಕ್ ಕ್ಯಾಪ್ಸ್ ಗೆ ಬಳಿಕ ಪ್ಲಿಮ್ಮರ್ ಮತ್ತು ವಿ.ಕೀಪರ್ ಇಸಾಬೆಲ್ಲಾ ಗೇಜ್ ನೆರವು ನೀಡಿದರು. ಪ್ಲಿಮ್ಮರ್ 35 ರನ್ ಗಳಿಸಿದರೆ, ಗೇಜ್ 26 ರನ್ ಮಾಡಿದರು.
ಕಿವೀಸ್ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 107 ರನ್ ಮಾತ್ರ ಗಳಿಸಲು ಶಕ್ತವಾಯಿತು. ಭಾರತದ ಪರ ಪಾರ್ಶವಿ ಚೋಪ್ರಾ ಮೂರು ವಿಕೆಟ್, ಟಿಟಸ್ ಸಧು, ಮನ್ನತ್ ಕಶ್ಯಪ್, ಅರ್ಚನಾ ದೇವಿ ಮತ್ತು ನಾಯಕಿ ಶಫಾಲಿ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ಸುಮಲತಾ ಅವರು ಬಿಜೆಪಿ ಸೇರಿದರೆ ಸಂತೋಷ: ಸಿ.ಟಿ ರವಿ
Related Articles
ಸುಲಭ ಗುರಿ ಬೆನ್ನತ್ತಿದ ಭಾರತ ತಂಡವು ಆರಂಭದಲ್ಲೇ ನಾಯಕಿ ಶಫಾಲಿ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಮತ್ತೋರ್ವ ಆರಂಭಿಕ ಆಟಗಾರ್ತಿ ಶ್ವೇತಾ ಸೆಹರಾವತ್ ಅವರು ಅಜೇಯ 61 ರನ್ ಗಳಿಸಿ ತಂಡದ ಗೆಲುವಿಗೆ ಸಹಕಾರಿಯಾದರು. ಸೌಮ್ಯ ತಿವಾರಿ 22 ರನ್ ಮಾಡಿದರು.
ಕೇವಲ 14.2 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡ ಭಾರತ 110 ರನ್ ಮಾಡಿ ಜಯ ಗಳಿಸಿತು. ಇದರೊಂದಿಗೆ ಅಂಡರ್ 19 ವಿಶ್ವಕಪ್ ಕೂಟದ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯವು ರವಿವಾರ ನಡೆಯಲಿದೆ.