ಬಿರಾಟನಗರ (ನೇಪಾಲ): ಭಾರತದ ವನಿತಾ ಫುಟ್‌ಬಾಲ್ ತಂಡ “ಸ್ಯಾಫ್ ಚಾಂಪಿಯನ್‌ಶಿಪ್’ ಕೂಟದ ಸೆಮಿಫೈನಲ್ ಪ್ರವೇಶಿಸಿದೆ. ಈ ಮೂಲಕ 4 ಬಾರಿಯ ಹಾಲಿ ಚಾಂಪಿಯನ್ ಭಾರತ ಈ ಕೂಟದ ಇತಿಹಾಸದಲ್ಲಿ ಸತತ 21 ಪಂದ್ಯಗಳಲ್ಲಿ ಜಯ ಸಾಧಿಸಿ ಮೆರೆದಿದೆ. ರವಿವಾರ “ಶಾಹಿದ್ ರಂಗಶಾಲಾ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು 5-0 ಗೋಲುಗಳ ಅಂತರದಿಂದ ಸೋಲಿಸಿತು. ಇದರೊಂದಿಗೆ “ಬಿ’ ಗುಂಪಿನಲ್ಲಿ ಅಗ್ರಸ್ಥಾನ ಅಲಂಕರಿ ಸಿತು. ಬುಧವಾರ ನಡೆಯುವ ಸೆಮಿಫೈನಲ್‌ನಲ್ಲಿ ಭಾರತ “ಎ’ ಗುಂಪಿನ ರನ್ನರ್ ಅಪ್ ಬಾಂಗ್ಲಾದೇಶವನ್ನು ಎದುರಿಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಅತಿಥೇಯ ನೇಪಾಲ ತಂಡದ ವಿರುದ್ಧ ಆಡಲಿದೆ.
4ನೇ ನಿಮಿಷದಲ್ಲೇ ಗೋಲು
ಭಾರತ ಗ್ರೇಸ್ ದಾಂಗ್‌ಮಿ ನೆರವಿನಿಂದ 4ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆಯಿತು. 3 ನಿಮಿಷಗಳ ಬಳಿಕ ಸಂಜು ಗೋಲು ಹೊಡೆದು ಭಾರತಕ್ಕೆ 2-0 ಮುನ್ನಡೆ ತಂದುಕೊಟ್ಟರು. 36ನೇ ನಿಮಿಷದಲ್ಲಿ ಶ್ರೀಲಂಕಾದ ರಕ್ಷಣಾ ಪಡೆಯನ್ನು ಭೇದಿಸಿದ ಇಂದುಮತಿ ಭಾರತಕ್ಕೆ 3ನೇ ಗೋಲು ತಂದಿತ್ತರು. ಮೊದಲರ್ಧದ ಕೊನೆಯ ಕ್ಷಣದಲ್ಲಿ ಸಂಗೀತಾ 4ನೇ ಗೋಲಿನ ಕಾಣಿಕೆ ಸಲ್ಲಿದರು. ದ್ವಿತೀಯಾರ್ಧದಲ್ಲೂ ಭಾರತ ಇದೇ ಆಟ ಮುಂದುವರಿಸಿದರೂ ಗಳಿಸಲು ಸಾಧ್ಯವಾದದ್ದು ಒಂದು ಗೋಲು ಮಾತ್ರ. ಇದನ್ನು ದಾಖ ಲಿಸಿದವರು ಜಬಾಮಣಿ ತುಡು.