ದುಬಾೖ : ಮೊನ್ನೆ ಮೊನ್ನೆಯಷ್ಟೇ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮುಗಿದು, ನ್ಯೂಜಿಲ್ಯಾಂಡ್ ಪ್ರಶಸ್ತಿಯನ್ನೆತ್ತಿದ್ದು ಈಗ ಇತಿಹಾಸ. ಅಷ್ಟರಲ್ಲಿ ದ್ವಿತೀಯ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಮೂಲಕ ಇದಕ್ಕೆ ಚಾಲನೆ ಲಭಿಸಲಿದೆ ಎಂದು ಐಸಿಸಿ ಪ್ರಕಟಿಸಿದೆ.
ಈ ಆವೃತ್ತ 2023ಕ್ಕೆ ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ಭಾರತ-ಇಂಗ್ಲೆಂಡ್ ಹೊರತುಪಡಿಸಿಸಿದರೆ 5 ಪಂದ್ಯಗಳ ಸರಣಿಯನ್ನು ಹೊಂದಿರುವುದು ಆ್ಯಶಸ್ ಮಾತ್ರ. ಮುಂದಿನ ವರ್ಷ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯ 4 ಟೆಸ್ಟ್ ಗಳನ್ನಷ್ಟೇ ಆಡಲಿದೆ. 9 ಟೆಸ್ಟ್ ತಂಡಗಳು ಒಟ್ಟು 6 ಸರಣಿಗಳನ್ನು ಆಡಲಿದೆ.
ಮೊದಲ ಆವೃತ್ತಿಯ ಅಂಕ ಪದ್ಧತಿ ತೀರಾ ಗೊಂದಲ ಹಾಗೂ ವಿವಾದಕ್ಕೆಡೆ ಮಾಡಿತ್ತು. ಕೊರೊನಾ ಕಾರಣ ರದ್ದುಗೊಂಡ ಸರಣಿಗಳ ಸರಾಸರಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಇದರಿಂದ ಕಿವೀಸ್ ಫೈನಲ್‌ಗೆ ಏರಲು ಇದೂ ಒಂದು ಕಾರಣವಾಗಿತ್ತು.
ಎರಡನೇ ಆವೃತ್ತಿಯಿಂದ ಅಂಕ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾ ಯಿಸಲಾಗಿದೆ. ಗೆಲುವಿಗೆ 12, ಟೈ ಆದರೆ 6 ಹಾಗೂ ಡ್ರಾಗೊಂಡರೆ 4 ಅಂಕ ನೀಡಲಾಗುವುದು ಎಂದು ಐಸಿಸಿ ಸಿಇಒ ಗೆಫ್ ಅಲಡೈìಸ್ ಮೊದಲೇ ಪ್ರಕಟಿಸಿದ್ದರು. ಇದನ್ನು ಅಧಿಕೃತಗೊಳಿಸಲಾಗಿದೆ. ಗೆಲುವಿನ ಸರಾಸರಿ ಅಂಕಗಳ ಆಧಾರದಲ್ಲಿ ತಂಡಗಳ ರ್‍ಯಾಂಕಿಂಗ್ ನಿರ್ಧಾರಗೊಳ್ಳಲಿದೆ.
ಇಂಗ್ಲೆಂಡಿಗೆ ಅತ್ಯಧಿಕ ಟೆಸ್ಟ್
ದ್ವಿತೀಯ ಆವೃತ್ತಿಯಲ್ಲಿ ಇಂಗ್ಲೆಂಡ್ ಗರಿಷ್ಠ 21 ಟೆಸ್ಟ್ ಪಂದ್ಯಗಳನ್ನು ಆಡುವ ಅವಕಾಶ ಪಡೆಯಲಿದೆ. ಭಾರತ 19, ಆಸ್ಟ್ರೇಲಿಯ 18, ದಕ್ಷಿಣ ಆಫ್ರಿಕಾ 15, ಪಾಕಿಸ್ಥಾನ 14; ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಲಾ 13 ಟೆಸ್ಟ್ ಪಂದ್ಯಗಳನ್ನು ಆಡಲಿವೆ.