Advertisement
ಇಸ್ರೇಲ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಮಧ್ಯಪ್ರಾಚ್ಯದ ಪ್ರಮುಖ ದೇಶಗಳೊಂದಿಗೆ ಭಾರತದ ಬಾಂಧವ್ಯ ಆಳವಾಗುತ್ತಿರುವುದು ಮತ್ತು ಬೆಳೆಯುತ್ತಿರುವುದರ ಕುರಿತು ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ. ಈ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಭಾರತದ ಪಾತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಹೊಸ ಬಹುಧ್ರುವೀಯತೆಯಿಂದ ಲಾಭ ಗಳಿಸಲು ಈ ದೇಶಗಳು ನಡೆಸುತ್ತಿರುವ ಯತ್ನವನ್ನು ಪ್ರತಿಬಿಂಬಿಸುತ್ತಿದೆ ಎಂದೂ ಲೇಖಕ ಸ್ಟೀವನ್ ಎ ಕುಕ್ ಹೇಳಿದ್ದಾರೆ.
ಅಮೆರಿಕದ ಮಧ್ಯಪ್ರಾಚ್ಯ ಪಾಲುದಾರರು ವಾಷಿಂಗ್ಟನ್ ಹೊರತುಪಡಿಸಿದ ಪರ್ಯಾಯವೊಂದರ ಹುಡುಕಾಟದಲ್ಲಿದ್ದರೆ, ಅಂಥವರಿಗೆ ಅತ್ಯುತ್ತಮ ಆಯ್ಕೆಯೇ ಭಾರತ. ಈ ಪ್ರದೇಶದಲ್ಲಿ ಅಮೆರಿಕವೇ ಪ್ರಬಲ ರಾಷ್ಟ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಭಾರತವು ಮಧ್ಯಪ್ರಾಚ್ಯದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿದರೆ, ರಷ್ಯಾ ಆಗಲೀ, ಚೀನಾ ಆಗಲೀ ಏನೂ ಮಾಡಲಾಗದು ಎಂದೂ ಲೇಖಕರು ಅಭಿಪ್ರಾಯಪಟ್ಟಿದ್ದಾರೆ. ಒಂದು ಕಾಲದಲ್ಲಿ ಇಸ್ರೇಲ್‌ನಲ್ಲಿ ಬಂಡವಾಳ ಹೂಡಿಕೆ ಮಾಡಲು ಭಾರತದ ಉದ್ಯಮ ಸಮುದಾಯವು ಹಿಂದೇಟು ಹಾಕುತ್ತಿತ್ತು. ಇಸ್ರೇಲ್‌ನ ಮಾರುಕಟ್ಟೆ ವ್ಯಾಪ್ತಿ ಕಿರಿದಾಗಿರುವುದು ಹಾಗೂ ವಿವಾದಿತ ರಾಜಕೀಯ ನೀತಿಗಳೇ ಇದಕ್ಕೆ ಕಾರಣ. ಆದರೆ, 2017ರಲ್ಲಿ ಪ್ರಧಾನಿ ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡಿ ಬಂದ ಬಳಿಕ ಪರಿಸ್ಥಿತಿ ಬದಲಾಗಿದೆ. 2022ರಲ್ಲಿ ಅದಾನಿ ಗ್ರೂಪ್ ಮತ್ತು ಇಸ್ರೇಲ್‌ನ ಕಂಪನಿಯೊಂದು 1.2 ಶತಕೋಟಿ ಡಾಲರ್ ಮೊತ್ತದ ಹೈಫಾ ಬಂದರು ಟೆಂಡರ್ ಪಡೆದುಕೊಂಡವು ಎಂದು ಅವರು ಬರೆದಿದ್ದಾರೆ.