Advertisement

ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತ ಮೇಲುಗೈ

09:41 PM Jul 01, 2021 | Team Udayavani |

ರಾಣಿಬೆನ್ನೂರ: ಮಳೆಯ ಅನಿಶ್ಚಿತತೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಸಿರಿಧಾನ್ಯಗಳು ಸೂಕ್ತ. ಇತ್ತೀಚಿನ ದಿನಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಭಾರತವು ಗಣನೀಯ ಮೇಲುಗೈ ಸಾಧಿಸಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಹೇಳಿದರು.

Advertisement

ತಾಲೂಕಿನ ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸಿರಿಧಾನ್ಯಗಳ ಉತ್ಪಾದನಾ ತಾಂತ್ರಿಕತೆ ಹಾಗೂ ಅದರ ಮೌಲ್ಯವರ್ಧನೆಗಳ ಕುರಿತು ನಡೆದ ಆನ್‌ಲೈನ್‌ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರಸ್ತುತ ಆಹಾರಧಾನ್ಯ ಉತ್ಪಾದನೆಯಲ್ಲಿ ಅದು ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ನಮ್ಮ ರಾಜ್ಯವು ಈ ದಿಶೆಯಲ್ಲಿ ಮಹತ್ತರ ಸಾಧನೆಗೈಯುತ್ತ, ಗೋವಿನ ಜೋಳ ಉತ್ಪಾದನೆಯಲ್ಲಿ ಮೊದಲನೇ ಸ್ಥಾನ ಪಡೆದಿದೆ ಎಂದರು.

ಇನ್ನು ಎಣ್ಣಕಾಳು ಹಾಗೂ ಒಟ್ಟಾರೆ ಧಾನ್ಯಗಳ ಉತ್ಪಾದನೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಸಿರಿಧಾನ್ಯಗಳನ್ನು ನೂತನ ತಾಂತ್ರಿಕತೆ ಅಳವಡಿಸಿ ಹೆಚ್ಚಿನ ಇಳುವರಿ ಪಡೆಯಬಹುದು. ನವಣೆ ಬರಗಾಲದಲ್ಲಿ ಒಂದು ಆಶಾದಾಯಕ ಕಿರುಧಾನ್ಯ. ಇದು ಅಲ್ಪಾವಧಿ ಬೆಳೆಯಾಗಿದ್ದು ಸುಮಾರು 90-100 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಎಂತಹ ಹವಾಮಾನಕ್ಕೂ ಸುಲಭದಲ್ಲಿ ಹೊಂದಿಕೊಳ್ಳುವ ಗುಣ ಹೊಂದಿದೆ ಎಂದರು.

ಸಾವೆ ಉತ್ತರ ಕರ್ನಾಟಕದ ಮುಖ್ಯ ಕಿರುಧಾನ್ಯವಾಗಿದ್ದು, ಹಿಂದಿನ ಕಾಲದಿಂದಲೂ ಈ ಬೆಳೆಯನ್ನು ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ. ತಳಿಗಳಾದ ಡಿಎಚ್‌ಎಲ್‌ಎಂ -36-3 ಮತ್ತು ಸುಕ್ಷೇಮ-8ನ್ನು ಬಿತ್ತನೆಗೆ ಜೂನ್‌ ಮೊದಲ ವಾರದಲ್ಲಿ ಬಿತ್ತನೆಗೆ ಅತಿ ಸೂಕ್ತ. ಪ್ರತಿ ಎಕರೆಗೆ 6 ಕಿಲೋ ಬಿತ್ತನೆ ಬೀಜವನ್ನು 200 ಗ್ರಾಂ ಅಜೋಸ್ಪಿರಿಲಮ್‌ ಜೈವಿಕ ಗೊಬ್ಬರದೊಂದಿಗೆ ಬೀಜೋಪಚಾರ ಮಾಡಿ 22.5 ಸೆಂಮೀ ಅಂತರದ ಸಾಲುಗಳಲ್ಲಿ ತೇಲಿಸಿ ಕೂರಿಗೆ ಬಿತ್ತನೆ ಮಾಡಬೇಕು ಎಂದರು. ಊದಲು ಅಲ್ಪಾವಧಿ  ಬೆಳೆಯಾಗಿದ್ದು, ರೋಗ ಮತ್ತು ಕೀಟ ನಿರೋಧಕ ಶಕ್ತಿ ಹೊಂದಿದೆ. ಬಿತ್ತನೆಗೆ 2-3 ವಾರಗಳ ಮುಂಚೆಯೇ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟನ್ನು ಮಣ್ಣಿನಲ್ಲಿ ಬೆರೆಸಿ, ಬಿತ್ತನೆ ಬೀಜವನ್ನು 22.5 ರಿಂದ 30 ಸೆಂಮೀ ಅಂತರದ ಸಾಲುಗಳಲ್ಲಿ 4 ಸೆಂಮೀಗಿಂತ ಹೆಚ್ಚು ಆಳವಿಲ್ಲದಂತೆ, ಸಾಲಿನಲ್ಲಿ ಬೀಜದಿಂದ ಬೀಜಕ್ಕೆ 5 ಸೆಂಮೀ ಅಂತರವಿರುವಂತೆ ಬಿತ್ತನೆ ಮಾಡಬೇಕು ಎಂದರು.

ಧಾರವಾಡ ಕೃಷಿ ವಿವಿ ಪ್ರಾಧ್ಯಾಪಕಿ ಡಾ| ಉಮಾ ಕುಲಕರ್ಣಿ ಮಾತನಾಡಿ, ಸಿರಿಧಾನ್ಯಗಳು ಉತ್ತಮ ಆ್ಯಂಟಿ ಆಕ್ಸಿಡೆಂಟ್‌. ಇವುಗಳಿಗೆ ಕ್ಯಾನ್ಸರ್‌ ತಡೆಗಟ್ಟುವ ಗುಣ ಸಹ ಇದೆ. ಸಿರಿಧಾನ್ಯಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಹಾಗೂ ದೇಹದಲ್ಲಿ ಗಡ್ಡೆಗಳಾಗುವುದನ್ನು ತಡೆಯುತ್ತವೆ. ಕಡಿಮೆ ಗ್ಲೆ„ಸಿಮಿಕ್‌ ಸೂಚ್ಯಾಂಕ ಹೊಂದಿರುವುದರಿಂದ ನಿಧಾನವಾಗಿ ಜೀರ್ಣವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಲು ಸಹಾಯ ಮಾಡುತ್ತವೆ ಎಂದರು.

Advertisement

ಇವುಗಳಲ್ಲಿರುವ ಒಮೆಗಾ-3 ಕೊಬ್ಬಿನ ಆಮ್ಲಗಳು ಫ್ಯಾಟಿ ಆ್ಯಸಿಡ್ಸ್‌ ಹೃದಯ ರೋಗಿಗಳಿಗೆ ಸಹಕಾರಿಯಾಗಿವೆ. ಉತ್ತಮ ಖನಿಜಾಂಶಗಳನ್ನು ಹೊಂದಿರುವುದರಿಂದ ರಕ್ತದೊತ್ತಡ, ಅಸ್ತಮಾ, ಹೃದಯದ ತೊಂದರೆಗಳ ನಿವಾರಣೆಯಲ್ಲಿ ಸಹಾಯ ಮಾಡುತ್ತವೆ. ಈ ಧಾನ್ಯಗಳು ಉತ್ತಮ ಗುಣಮಟ್ಟದ ಅವಶ್ಯಕ ಅಮೈನೊ ಆ್ಯಸಿಡ್ಸ್‌ ಹೊಂದಿವೆ. ಆಧುನಿಕ ಜೀವನ ಶೈಲಿಯಿಂದ ಬರುವ ರೋಗಗಳು ಮತ್ತು ರೋಗ ಲಕ್ಷಣಗಳನ್ನು ತಡೆಯುವಲ್ಲಿ ಈ ಧಾನ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಬೊಜ್ಜುತನ, ಮಧುಮೇಹದಂತಹ ರೋಗಗಳಿಗೆ ಉತ್ತಮ ಆಹಾರ ಕ್ರಮಗಳಾಗಿವೆ ಎಂದು ವಿವರಿಸಿದರು. ಸಿರಿಧಾನ್ಯ ಬೆಳೆಗಾರರು ಸುಮಾರು 50 ರೈತರು ಭಾಗವಹಿಸಿ ತರಬೇತಿ ಪ್ರಯೋಜನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next