Advertisement

ಭಾರತಕ್ಕೆ ಅತಿಕ್ರಮಣ ಪ್ರವೃತ್ತಿಯಿಲ್ಲ

06:10 AM Jan 10, 2018 | Harsha Rao |

ನವದೆಹಲಿ:ಯಾವುದೇ ದೇಶದ ಭೂಭಾಗವನ್ನು ಅಥವಾ ಸಂಪನ್ಮೂಲವನ್ನು ಅತಿಕ್ರಮಿಸುವಂಥ ಪ್ರವೃತ್ತಿ ಭಾರತಕ್ಕಿಲ್ಲ. ಅಂಥದ್ದರ ಬಗ್ಗೆ ಭಾರತ ಆಸಕ್ತಿಯನ್ನೇ ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ದೇಶವು ಯಾವುದೇ ಲಾಭ-ನಷ್ಟವನ್ನು ಮುಂದಿಟ್ಟುಕೊಳ್ಳದೆ ಕೇವಲ ಮಾನವೀಯತೆಯ ಸಂಬಂಧ ಬೆಳೆಸುತ್ತದೆ ಎಂದು ಅವರು ಹೇಳಿದ್ದಾರೆ. 

Advertisement

ನವದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಜಗತ್ತಿನಾದ್ಯಂತ ಇರುವ ಭಾರತೀಯ ಮೂಲದ ಸಂಸತ್‌ ಸದಸ್ಯರ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತ ಯಾವತ್ತೂ ವಿಶ್ವದ ಭೂಪಟದಲ್ಲಿ ಧನಾತ್ಮಕ ಕೊಡುಗೆಯತ್ತಲೇ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ. ಜತೆಗೆ, “ತೀವ್ರಗಾಮಿತ್ವ ಮತ್ತು ಮೂಲ ಭೂತವಾದ (ರಾಡಿಕಲೈಸೇಷನ್‌)ದ ವಿರುದ್ಧ ಹೋರಾಟ ನಡೆಸುವುದಿದ್ದರೆ ಅದು ಮಹಾತ್ಮಾ ಗಾಂಧೀಜಿಯವರ ಅಹಿಂಸಾ ಮಾರ್ಗ ಮತ್ತು ಸತ್ಯಾಗ್ರ ಹದಿಂದಷ್ಟೇ ಸಾಧ್ಯ’ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮುಕ್ತಾಯವಾದ ಚೀನಾ ಜತೆಗಿನ ಗಡಿ ತಂಟೆ ಹಿನ್ನೆಲೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಈ ಮಾತುಗಳನ್ನಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. 

ಭಾರತ ಹೊಂದಿರುವ ಅಭಿವೃದ್ಧಿಯ ಮಾನದಂಡ ಕೊಡುಕೊಳ್ಳುವಿಕೆಯ ಆಧಾರವಾಗಿರದೆ ಆಯಾ ದೇಶಗಳ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ವಿವಿಧ ದೃಷ್ಟಿಕೋನಗಳ ಹಿನ್ನೆಲೆಯಲ್ಲಿ ವಿಶ್ವವೇ ವಿಭಜನೆ ಹೊಂದಿರುವಾಗ ನಾವು “ಸಬ್‌ ಕಾ ಸಾಥ್‌, ಸಬ್‌ಕಾ ವಿಕಾಸ್‌’ ಎಂಬ ಘೋಷಣೆ ಮುಂದಿಟ್ಟು ಕೊಂಡು ಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ. 

21ನೇ ಶತಮಾನ ಎನ್ನುವುದು ಏಷ್ಯಾದ ಶತಮಾನ. ಹೀಗಾಗಿ ಭಾರತ  ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದರು. ದೇಶದ ಅರ್ಥ ವ್ಯವಸ್ಥೆ ಬದಲಾಗುತ್ತಿದೆ. ಹೀಗಾಗಿ ಭಾರತದ ಅರ್ಥ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು ಎಂದು ವಿವಿಧ ದೇಶಗಳಲ್ಲಿರುವ ಭಾರತೀಯ ಮೂಲದ ಸಂಸದರಿಗೆ ಪ್ರಧಾನಿ ಮನವಿ ಮಾಡಿಕೊಂಡರು. ಕಳೆದ ಮೂರು ವರ್ಷಗಳಲ್ಲಿ 60 ಬಿಲಿಯನ್‌ ಡಾಲರ್‌ ವಿದೇಶಿ ಹೂಡಿಕೆ ದೇಶಕ್ಕೆ ಹರಿದು ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next