ಹೊಸದಿಲ್ಲಿ: ಕೆನಡಾದಲ್ಲಿ ನಡೆಯುತ್ತಿರುವ “ವಿಶ್ವ ಜೂನಿಯರ್ ಬ್ಯಾಡ್ಮಿಂಟನ್’ ಕೂಟದ ಮಿಶ್ರ ತಂಡ ಸ್ಪರ್ಧೆಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲನುಭವಿಸುವ ಮೂಲಕ ಭಾರತ ಕೂಟದಿಂದ ಹೊರಬಿದ್ದಿದೆ.
ಲಕ್ಷಯ್ ಸೇನ್ ಅವರನ್ನು ಒಳಗೊಂಡ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ 1-3 ಅಂತರದಿಂದ ಸೋತಿದೆ. ಏಶ್ಯನ್ ಜೂನಿಯರ್ ಚಾಂಪಿಯನ್ ಲಕ್ಷಯ್ ಸೇನ್ ಉತ್ತಮ ಪ್ರದರ್ಶನ ತೋರಿ ಗೆಲುವು ದಾಖಲಿಸಿದರೆ, ಡಬಲ್ಸ್ ವಿಭಾಗದಲ್ಲಿ ಎರಡೂ ಜೋಡಿಗಳು ಸೋಲನುಭವಿಸಿದವು.
ಕ್ವಾರ್ಟರ್ ಫೈನಲ್ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ತನಿಷಾ ಕ್ರಾಸ್ಟೊ-ಧ್ರುವ ಕಪಿಲ 22-20, 14-21, 12-21 ಗೇಮ್‌ಗಳಿಂದ ದಕ್ಷಿಣ ಕೊರಿಯದ ನಾ ಯುನ್ ಜಿಯಾಂಗ್-ಚಾನ್ ವಾಂಗ್ ವಿರುದ್ಧ ಸೋತರು.
ವಿಶ್ವದ 3ನೇ ಶ್ರೇಯಾಂಕಿತ ಲಕ್ಷಯ್ ಸೇನ್ ಸಿಂಗಲ್ಸ್ ಪಂದ್ಯದಲ್ಲಿ ಜಿ ಹೂನ್ ಚಾಯಿ ವಿರುದ್ಧ 16-21, 21-18, 21-12 ಗೇಮ್‌ಗಳಿಂದ ಗೆದ್ದು ಹೋರಾಟವನ್ನು 1-1 ಸಮಬಲಕ್ಕೆ ತಂದರು. ಮೊದಲ ಗೇಮ್‌ನಲ್ಲಿ ಸೋತ ಲಕ್ಷಯ್ ಬಳಿಕ ಎಚ್ಚರಿಕೆಯ ಆಟವಾಡಿ ಹಿಡಿತ ಸಾಧಿಸಿದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಕೃಷ್ಣ ಪ್ರಸಾದ್ ಗಾರಂಗ್-ಧ್ರುವ ಕಪಿಲ ಕೊರಿಯಾದ ತೈ ಯಾಗ್ ಶಿನ್-ಚಾನ್ ವಾಂಗ್ ಎದುರು 21-19, 19-21, 11-21 ಗೇಮ್‌ಗಳಿಂದ ಎಡವಿದರು. ಈ ಮೂಲಕ ಕೊರಿಯಾ 2-1 ಅಂಕಗಳ ಮುನ್ನಡೆ ಸಾಧಿಸಿತು. ಅನಂತರ ನಡೆದ ವನಿತಾ ಸಿಂಗಲ್ಸ್ ವಿಭಾಗದಲ್ಲಿ ಮಾಳವಿಕಾ ಬನ್ಸೋದ್ 17-21, 21-12 ನೇರ ಗೇಮ್‌ಗಳಿಂದ ಗಾ ಇನ್ ಪಾರ್ಕ್ ವಿರುದ್ಧ ಸೋತರು. ಹೀಗೆ ಕೊರಿಯಾ 3-1 ಅಂಕಗಳ ಮುನ್ನಡೆಯಿಂದ ಸೆಮಿಫೈನಲ್ ಪ್ರವೇಶಿಸಿತು.
5ರಿಂದ 8ನೇ ಸ್ಥಾನ
ಅನಂತರ 5ರಿಂದ 8 ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಭಾರತದ ತಂಡ ಡೆನ್ಮಾರ್ಕ್ ವಿರುದ್ಧ 3-1 ಅಂಕಗಳಿಂದ ಜಯ ಸಾಧಿಸಿದೆ. ಪುರುಷರ ಡಬಲ್ಸ್ ಜೋಡಿ ಕೃಷ್ಣ ಪ್ರಸಾದ್ ಗಾರಂಗ್-ಧ್ರುವ ಕಪಿಲ, ಮಿಶ್ರ ಜೋಡಿ ಸೃಷ್ಟಿ ಜಪ್ಪುಂಡಿ-ಶ್ರೀಕೃಷ್ಣ ಸಾಯಿಕುಮಾರ್ ಪೊಡಿಲೆ, ಸಿಂಗಲ್ಸ್ ಆಟಗಾರ ಕಿರಣ್ ಜಾರ್ಜ್ ಭಾರತಕ್ಕೆ ಜಯ ತಂದುಕೊಟ್ಟರು. ಶನಿವಾರ 5ರಿಂದ 6ನೇ ಸ್ಥಾನಕ್ಕೆ ನಡೆಯುವ ಪಂದ್ಯದಲ್ಲಿ ಭಾರತ ತಂಡ ಮಲೇಶ್ಯಾವನ್ನು ಎದುರಿಸಲಿದೆ.