ನವದೆಹಲಿ:ಮಾರಣಾಂತಿಕ ಕೋವಿಡ್ 19 ವೈರಸ್ ಪ್ರಕರಣಗಳು ಭಾರತದಲ್ಲಿ ಮೇ ಮೊದಲ ವಾರದವರೆಗೆ ದುಪ್ಪಟ್ಟಾಗಲಿದ್ದು, ನಂತರ ಅದರ ಪ್ರಮಾಣ ಕಡಿಮೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಆಂತರಿಕ ಮಾಪನ ಸಲಹೆ ನೀಡಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಕೆಲವು ರಾಜ್ಯಗಳು ಕೋವಿಡ್ 19 ವೈರಸ್ ವಿಪರೀತ ಹಂತ ತಲುಪುವ ಮುನ್ನವೇ ಲಾಕ್ ಡೌನ್ ಅನ್ನು ಕಠಿಣವಾಗಿ ಜಾರಿಗೊಳಿಸುವ ಮೂಲಕ ಕೋವಿಡ್ ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗುವುದನ್ನು ಕಡಿಮೆ ಮಾಡಿರುವುದಾಗಿ ತಿಳಿಸಿದೆ.
ರಾಜಸ್ಥಾನ್, ಪಂಜಾಬ್ ಮತ್ತು ಬಿಹಾರ ಸೇರಿದಂತೆ ಕೆಲವು ರಾಜ್ಯಗಳು ಕೋವಿಡ್ 19 ಸೋಂಕು ಪ್ರಕರಣ ಏರಿಕೆಯಾಗುವ ಮೊದಲೇ ಲಾಕ್ ಡೌನ್ ಘೋಷಿಸುವ ಮೂಲಕ ಬಿಕ್ಕಟ್ಟನ್ನು ಎದುರಿಸುವಲ್ಲಿ ಸಫಲವಾಗಿದೆ. ಈ ರಾಜ್ಯಗಳಿಗೆ ಹೋಲಿಸಿದರೆ ಉತ್ತರಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರ ವೈರಸ್ ಹರಡುವಿಕೆಗೆ ಅರ್ಧದಷ್ಟು ಕಡಿವಾಣ ಹಾಕಿರುವುದಾಗಿ ವರದಿ ವಿವರಿಸಿದೆ.
ಮುಂದಿನ ಒಂದು ವಾರಗಳ ಕಾಲ ಅತ್ಯಂತ ಕಠಿಣವಾಗಿದೆ. ಇದು ಭಾರತಕ್ಕೆ ಅಗ್ನಿಪರೀಕ್ಷೆಯ ಕಾಲವಾಗಿದೆ. ಯಾರಿಗೆ ತುಂಬಾ ಗಂಭೀರವಾದ ಶ್ವಾಸಕೋಶದ, ಉಸಿರಾಟದ ತೊಂದರೆ, ಲಕ್ಷಣ ಕಾಣಿಸಿಕೊಳ್ಳುತ್ತದೆಯೋ ಅಂತಹವರನ್ನು ಪರೀಕ್ಷಿಸಬೇಕಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಎನ್ ಡಿಟಿವಿಗೆ ತಿಳಿಸಿದ್ದಾರೆ.
ಅವರ ಮಾಹಿತಿ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗಲಿದೆ. ಸಂಖ್ಯೆ ಅಧಿಕವಾದಂತೆ ನಾವು ಕೂಡಾ ಹೆಚ್ಚು, ಹೆಚ್ಚು ಪರೀಕ್ಷೆ ನಡೆಸಬೇಕಾಗುತ್ತದೆ. ಯಾರು ಐಸೋಲೇಶನ್ ನಲ್ಲಿ ಇದ್ದಾರೋ ಅವರ ಸಂಖ್ಯೆಯೂ ಅಧಿಕವಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಮೇ 3ರವರೆಗೆ ಲಾಕ್ ಡೌನ್ ವಿಸ್ತರಿಸಿದ್ದಾರೆ. ಅಲ್ಲದೇ ಭಾರತದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 12 ಸಾವಿರ ದಾಟಿದೆ. ಇದರಲ್ಲಿ 36ಸಾವಿರ ಜನರನ್ನು ಸರ್ಕಾರ ಒಂದೋ ಐಸೋಲೇಶನ್ ಅಥವಾ ಹೋಮ್ ಕ್ವಾರಂಟೈನ್ ನಲ್ಲಿ ಇರಿಸಬೇಕಾಗಲಿದೆ. ಇದು ಅತೀ ವೇಗವಾಗಿ ಹರಡದಂತೆ ತಡೆಯುವುದು ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.