Advertisement

ಭಾರತಕ್ಕೆ ರಷ್ಯಾ ತೈಲ? ರೂಪಾಯಿ-ರೂಬಲ್‌ ಮೂಲಕ ಪಾವತಿ; ಶೀಘ್ರದಲ್ಲೇ ನಡೆಯಲಿದೆ ಮಾತುಕತೆ

11:44 PM Mar 14, 2022 | Team Udayavani |

ಮಾಸ್ಕೋ/ಹೊಸದಿಲ್ಲಿ: ಉಕ್ರೇನ್‌ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ದೇಶಕ್ಕೆ ಕಚ್ಚಾ ತೈಲದ ಮೂಲಕ ಲಾಭವಾಗುವ ಲಕ್ಷಣಗಳು ಗೋಚರಿಸಿವೆ.

Advertisement

ಕೇಂದ್ರ ಸರಕಾರದ ಸದ್ಯದ ಕ್ರಮವನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುವ ಸಾಧ್ಯತೆ ಇದೆ. ರಿಯಾಯಿತಿ ದರದಲ್ಲಿ ಪುತಿನ್‌ ಸರಕಾರ ಭಾರತಕ್ಕೆ ಕಚ್ಚಾ ತೈಲ ಮಾರಲೂ ಮುಂದಾಗಿದೆ. ಅದಕ್ಕಾಗಿ ರೂಪಾಯಿ ಮತ್ತು ರಷ್ಯಾದ ಕರೆನ್ಸಿ ರೂಬಲ್‌ ಮೂಲಕ ಪಾವತಿ ಮಾಡುವ ಬಗ್ಗೆಯೂ ಚಿಂತನೆಗಳು ನಡೆದಿವೆ. ಇಂಥ ಕ್ರಮದ ಮೂಲಕ ಹಣ ದುಬ್ಬರದ ಪ್ರಮಾಣ ಕಡಿಮೆ ಮಾಡಿಕೊಳ್ಳಲು ಸರಕಾರ ತೀರ್ಮಾನಿಸಿದೆ. ಕಚ್ಚಾ ತೈಲ ಖರೀದಿ ನಿಟ್ಟಿನಲ್ಲಿ ಅದನ್ನು ಸಾಗಿಸಲು ಬೇಕಾಗಿರುವ ಕಂಟೈನರ್‌ ಹಡಗು ಗಳು, ದೇಶದಲ್ಲಿ ಇರುವ ಸರಕಾರಿ ಸ್ವಾಮ್ಯದ ತೈಲ ಶುದ್ಧೀಕರಣ ಗಾರ ಗಳಿಗೆ ಬೇಕಾಗಿರುವ ರೀತಿಯಲ್ಲಿ ಕಚ್ಚಾ ತೈಲ ಪೂರೈಸುವ ಬಗ್ಗೆಯೂ ಶೀಘ್ರ ಮಾತುಕತೆ ನಡೆಸುವ ಸಾಧ್ಯತೆಗಳಿವೆ.

ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಭಾರೀ ದಿಗ್ಬಂಧನಗಳನ್ನು ಹೇರಿರುವ ಕಾರಣ ರಷ್ಯಾ ಸರಕಾರದ ತೈಲ ಕಂಪೆನಿ ರೋಸ್ನೆಫ್ಟ್ ನಲ್ಲಿ ಭಾರೀ ಪ್ರಮಾಣದ ಕಚ್ಚಾ ತೈಲ ದಾಸ್ತಾನಿದೆ. ಅದನ್ನು ಮಾರಾಟ ಮಾಡಿ ಲಾಭ ಗಳಿಸಬೇಕಾದ ಅನಿವಾರ್ಯತೆಯಲ್ಲಿದೆ. ಆದರೆ ರಷ್ಯಾ ವಿರುದ್ಧ ದಿಗ್ಬಂಧನ ಹೇರಿರುವ ಹಿನ್ನೆಲೆಯಲ್ಲಿ ಈ ವ್ಯವಹಾರ ಸುಸೂತ್ರವಾಗಿ ನಡೆಯಲಿದೆಯೇ ಎಂಬ ಜಿಜ್ಞಾಸೆಯೂ ಉಂಟಾಗಿದೆ.

ಪಾವತಿ ಹೇಗೆ?
ರಷ್ಯಾಕ್ಕೆ ಭಾರತದ ವತಿಯಿಂದ ರೂಪಾಯಿಯಲ್ಲಿ ಮತ್ತು ರಷ್ಯಾದ ವತಿಯಿಂದ ಕೇಂದ್ರಕ್ಕೆ ನೀಡುವ ಮೊತ್ತವನ್ನು ರೂಬಲ್‌ ಮೂಲಕ ಪಾವತಿ ಮಾಡಲು ಒಪ್ಪಿಕೊಳ್ಳಲಾಗಿದೆ.

ರಷ್ಯಾ ಪಾಲೆಷ್ಟು?
ದೇಶದ ಕಚ್ಚಾ ತೈಲದ ಅಗತ್ಯಗಳ ಪೈಕಿ ಶೇ.80ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ರಷ್ಯಾದಿಂದ ಶೇ.2 ರಿಂದ ಶೇ.3ರ ಪ್ರಮಾಣದಲ್ಲಿ ಖರೀದಿಸುತ್ತಿದೆ. ಒಂದು ವೇಳೆ, ಪುತಿನ್‌ ಸರಕಾರದ ಜತೆಗೆ ತೈಲ ಒಪ್ಪಂದ ಉಂಟಾದರೆ, ಭಾರೀ ರಿಯಾಯಿತಿ ದರದಲ್ಲಿ ದೇಶಕ್ಕೆ ಕಚ್ಚಾ ತೈಲ ಲಭ್ಯವಾಗುವ ಸಾಧ್ಯತೆ ಇದೆ.

Advertisement

ಇದನ್ನೂ ಓದಿ:ಅಗತ್ಯ ಇರುವ ಕಡೆ ಉಪ ನೋಂದಣಾಧಿಕಾರಿ ಕಚೇರಿ: ಅಶೋಕ್‌

ನಿಲ್ಲದ ಕಾಳಗ
ಡಾನೆಸ್ಕ್ ಪ್ರದೇಶದಲ್ಲಿ ಉಕ್ರೇನ್‌ ಕ್ಷಿಪಣಿ ದಾಳಿಯಿಂದ 20 ಮಂದಿ ಅಸುನೀಗಿದ್ದಾರೆ ಎಂದು ರಷ್ಯಾ ಆರೋಪಿಸಿದೆ. ಮತ್ತೊಂದೆಡೆ, ಸೇನಾ ದಾಳಿ ಮೂಲಕ ಪೂರ್ಣ ಪ್ರಮಾಣದಲ್ಲಿ ಉಕ್ರೇನ್‌ ಅನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಯನ್ನು ತಳ್ಳಿಹಾಕುವುದಿಲ್ಲ ಎಂದು ರಷ್ಯಾ ಸಂಸತ್‌, ಕ್ರೆಮ್ಲಿನ್‌ ಹೇಳಿಕೊಂಡಿದೆ. ಜತೆಗೆ ಚೀನದಿಂದ ಮಿಲಿಟರಿ ಮತ್ತು ಇತರ ನೆರವನ್ನು ಪಡೆದುಕೊಳ್ಳಲು ಮುಂದಾಗಿದೆ ಎನ್ನುವುದು ಕೇವಲ ಅಮೆರಿಕ ಹಬ್ಬಿಸುತ್ತಿರುವ ವದಂತಿ ಎಂದೂ ಅದು ಆರೋಪಿಸಿದೆ. ಇದೆಲ್ಲದರ ನಡುವೆ ದಾಳಿಯೂ ಮುಂದುವರಿದೆ. ಉಕ್ರೇನ್‌ ಮತ್ತು ರಷ್ಯಾ ನಡುವಿನ ಶಾಂತಿ ಮಾತುಕತೆ ಮಂಗಳವಾರವೂ ಮುಂದುವರಿದಿದೆ.

ಯೋಧರ ಭೇಟಿ ಮಾಡಿದ ಝೆಲೆನ್‌ಸ್ಕಿ
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಯುದ್ಧದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಮ್ಮ ಯೋಧರ‌ ಹೋರಾಟದಿಂದಾಗಿಯೇ ಇನ್ನೂ ದೇಶ ಪುತಿನ್‌ ಸೇನೆಯ ವಶವಾಗಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷರ ಜತೆಗೆ ಯೋಧರು ತೆಗೆದ ಫೋಟೋ ಮತ್ತು ವೀಡಿಯೋ ಗಳು ವೈರಲ್‌ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next