Advertisement

“ಭಾರತದ ವಿಶ್ವಕಪ್‌ಗೆ ವೀಸಾ ಖಚಿತ ಪಡಿಸಿ’

11:12 AM Jun 29, 2020 | mahesh |

● ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಗೆ ಪಾಕ್‌ ಕ್ರಿಕೆಟ್‌ ಮಂಡಳಿ ಒತ್ತಾಯ
● 2021ರಲ್ಲಿ ಟಿ20, 2023ಕ್ಕೆ ಏಕದಿನ ಕೂಟಕ್ಕೆ ಭಾರತ ಆತಿಥ್ಯ

Advertisement

ಕರಾಚಿ: 2021 ಮತ್ತು 2023ರಲ್ಲಿ ಭಾರತದಲ್ಲಿ ಎರಡು ಕ್ರಿಕೆಟ್‌ ವಿಶ್ವಕಪ್‌ಗಳು ನಡೆಯಲಿವೆ. ಅದರಲ್ಲಿ ಪಾಲ್ಗೊಳ್ಳಲಿರುವ ತನ್ನ ಆಟಗಾರರಿಗೆ ಭಾರತ ವೀಸಾ ಸಿಗುವುದನ್ನು ಈಗಲೇ ಖಚಿತಪಡಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಗೆ ಆಗ್ರಹಿಸಿದೆ. ಈ ಬಗ್ಗೆ ಬಿಸಿಸಿಐ ಇನ್ನೆರಡು ತಿಂಗಳಲ್ಲಿ ಲಿಖಿತವಾಗಿ ಮಾಹಿತಿ ನೀಡಬೇಕು ಪಿಸಿಬಿ ಹೇಳಿದೆ. ಎರಡೂ ದೇಶಗಳ ನಡುವೆ ಶತೃತ್ವವಿರುವುದರಿಂದ ಈ  ಹಿಂದೆ, ಭಾರತ ಸರ್ಕಾರ ಪಾಕಿಸ್ತಾನ ಆಟಗಾರರಿಗೆ ವೀಸಾ ನೀಡಿರಲಿಲ್ಲ. ಎರಡೂ ದೇಶಗಳ ನಡುವೆ ಗಡಿಯಲ್ಲಿ ಕೆಲವು ವರ್ಷಗಳಿಂದ ಭಾರೀ ಘರ್ಷಣೆ ಸಂಭವಿಸಿದೆ. ಪರಿಣಾಮ ಸಂಬಂಧ ಸಂಪೂರ್ಣ ಹಳಸಿಹೋಗಿದೆ. ಇಷ್ಟಾದರೂ ತಾನು ಐಸಿಸಿ ಆಯೋಜಿಸುವ ಯಾವುದೇ ಕೂಟಗಳಲ್ಲಿ ಭಾರತದಲ್ಲಿ ಆಡಲು ಸಿದ್ಧವಿದ್ದೇನೆ. ವೀಸಾ ಸಿಗುವ ಬಗ್ಗೆ ಮಾತ್ರ ತನಗೆ ಐಸಿಸಿ ಖಚಿತಪಡಿಸಬೇಕೆಂದು ಪಿಸಿಬಿ ಹೇಳಿದೆ. ಆದರೆ ಸದ್ಯ ಭವಿಷ್ಯದಲ್ಲಿ ಎರಡೂ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್‌ ಸಾಧ್ಯತೆಯಿಲ್ಲವೆಂದು ಪಿಸಿಬಿ ಸಿಇಒ ವಾಸಿಂ ಖಾನ್‌ ಹೇಳಿದ್ದಾರೆ.

ಏನಿದು ವೀಸಾ ಪ್ರಕರಣ?
2021ರಲ್ಲಿ ಪೂರ್ವ ನಿಗದಿಯಂತೆ ಭಾರತದಲ್ಲಿ ಟಿ20 ವಿಶ್ವಕಪ್‌ ನಡೆಯಬೇಕು. ಆದರೆ ಈ ವರ್ಷ ಆಸ್ಟ್ರೇಲಿಯದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್‌ ಬಹುತೇಕ ರದ್ದಾಗುವುದರಿಂದ, ಮುಂದಿನ ವರ್ಷ ಭಾರತದಲ್ಲಿ ನಡೆಯಬೇಕಿರುವ ಕೂಟ ಆಸ್ಟ್ರೇಲಿಯಕ್ಕೆ ಸ್ಥಳಾಂತರಗೊಳ್ಳುವ ಎಲ್ಲ ಸಾಧ್ಯತೆಯಿದೆ. ಇನ್ನೊಂದು ಸಾಧ್ಯತೆಯ ಪ್ರಕಾರ ಈ ವರ್ಷ ಆಸೀಸ್‌ನಲ್ಲಿ ನಡೆಯಬೇಕಿರುವ ಕೂಟ 2022ರಲ್ಲೂ ನಡೆಯಬಹುದು! ಇನ್ನೊಂದು ಕಡೆ 2023ರಲ್ಲಿ ಭಾರತದಲ್ಲಿ ಏಕದಿನವಿಶ್ವಕಪ್‌ ಆಯೋಜನೆಯಾಗಲಿದೆ. ಇದು ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಆಯೋಜನೆಗೊಳ್ಳಲಿರುವ ಮೊದಲ ವಿಶ್ವಕಪ್‌!

ಈ ಎರಡು ವಿಶ್ವಕಪ್‌ಗಳಲ್ಲಿ ಪಾಕಿಸ್ತಾನ ಆಡಲು ಸಿದ್ಧವಿದೆ. ಆದರೆ ಎರಡೂ ದೇಶಗಳ ನಡುವೆ ಬೇರೆಬೇರೆ ಕಾರಣಕ್ಕೆ ಯಾವಾಗ ಬೇಕಾದರೂ ತಕರಾರು ಉದ್ಭವಿಸಬಹುದು. ಆಗ ಭಾರತ ಸರ್ಕಾರ ವೀಸಾ ನಿರಾಕರಿಸಲೂಬಹುದು. ಇದನ್ನೇ ಗಮನದಲ್ಲಿಟ್ಟು ಕೊಂಡಿರುವ ಪಿಸಿಬಿ, ಬಿಸಿಸಿಐ ಈಗಲೇ ಖಚಿತತೆ ನೀಡಬೇಕು ಎಂದು ಆಗ್ರಹಿಸಿದೆ. ಆದರೆ ಈ ಬಗ್ಗೆ ಬಿಸಿಸಿಐ ಭರವಸೆ ಕೊಡುವುದು ಅಸಾಧ್ಯ. ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡರೂ, ಅದು ಅದಕ್ಕೆ ಬದ್ಧವಾಗಬೇಕಾಗುತ್ತದೆ. ಒಂದು ವೇಳೆ ಈಗ ವೀಸಾ ನೀಡಲು ಒಪ್ಪಿ, ಮುಂದೆ ಬದಲಾದ ಪರಿಸ್ಥಿತಿಯಲ್ಲಿ ಕೇಂದ್ರ ತಿರಸ್ಕರಿಸಿದರೂ ಅದನ್ನು ಬಿಸಿಸಿಐ ಒಪ್ಪಿಕೊಳ್ಳಲೇಬೇಕಾಗುತ್ತದೆ. ಆಗ ಮಾತು ತಪ್ಪಿದ ಸ್ಥಾನದಲ್ಲಿ ಬಿಸಿಸಿಐ ನಿಲ್ಲುತ್ತದೆ. ಐಸಿಸಿ ನಿಯಮಗಳ ಪ್ರಕಾರ ಬಿಸಿಸಿಐ ಕಠಿಣ ಶಿಕ್ಷೆ ಎದುರಿಸಬೇಕಾಗಬಹುದು. ಈಗಲೇ ಬಿಸಿಸಿಐ ತನ್ನ ಅಸಹಾಯಕತೆಯನ್ನು ತಿಳಿಸಿದರೆ, ಅದಕ್ಕೆ ಎರಡು ಕೂಟಗಳ ಆತಿಥ್ಯ ಕೈತಪ್ಪಲೂಬಹುದು. ಪಿಸಿಬಿ ಇದನ್ನೆಲ್ಲ ಯೋಚಿಸಿಯೇ ಈ ರೀತಿಯ ಷರತ್ತನ್ನು ಮುಂದಿಟ್ಟಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next