ಆಫ್ರಿಕಾ ಖಂಡದ ದೇಶಗಳಲ್ಲಿ ಆತಂಕ ಸೃಷ್ಟಿಸಿರುವ ಮಂಗನ ಸಿಡುಬು (ಎಂಪಾಕ್ಸ್) ಭಾರತಕ್ಕೂ ಕಾಲಿಟ್ಟಿರುವ ಹಾಗಿದೆ. ವಿದೇಶದಿಂದ ಭಾರತಕ್ಕೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಎಂಪಾಕ್ಸ್ ಸೋಂಕಿರಬಹುದೆಂದು ಕೇಂದ್ರ ಆರೋಗ್ಯ ಇಲಾಖೆಯು ಶಂಕಿಸಿದ್ದು, ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿ ಇರಿಸಿ, ತೀವ್ರ ನಿಗಾ ವಹಿಸಲಾಗಿದೆ. ಸದ್ಯಕ್ಕೆ ಭಾರತದ ಮಟ್ಟಿಗೆ ತೀರಾ ಆತಂಕ ಪಡುವ ಅಗತ್ಯವಿಲ್ಲವಾದರೂ, ಮುಂಜಾಗ್ರತೆಯನ್ನು ಕೈಗೊಳ್ಳುವುದು ಅತ್ಯಗತ್ಯ.
ಮಂಗನ ಸಿಡುಬು ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯು 12 ಆಫ್ರಿಕನ್ ದೇಶಗಳಲ್ಲಿ “ತುರ್ತು ಪರಿಸ್ಥಿತಿ’ ಘೋಷಣೆ ಮಾಡಿದ 3 ವಾರಗಳ ಬಳಿಕ ಭಾರತದಲ್ಲಿ ಶಂಕಿತ ಎಂಪಾಕ್ಸ್ ಪ್ರಕರಣದ ವರದಿಯಾಗಿದೆ. ಆಥೋìಪಾಕ್ಸ್ ವೈರಸ್ ಕುಲಕ್ಕೆ ಸೇರಿದ ಈ ಸೋಂಕು ಸಿಡುಬು ರೋಗದ ಸಾಮ್ಯತೆ ಹೊಂದಿದೆ. ಇದನ್ನು 2 ಕ್ಲೇಡ್‌ಗಳಲ್ಲಿ ವಿಂಗಡಿಸಲಾಗಿದ್ದು, ಕಾಂಗೊ ಬೇಸಿನ್ ಒಂದು ಕ್ಲೇಡ್ ಆದರೆ ಮತ್ತೂಂದು ಪಶ್ಚಿಮ ಆಫ್ರಿಕಾ ಕ್ಲೇಡ್. ಕಾಂಗೊ ಬೇಸಿನ್ ಕ್ಲೇಡ್ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಾದ ನ್ಯುಮೋನಿಯಾ, ಬ್ಯಾಕ್ಟೀರಿಯಾ ಸೋಂಕು ಹಾಗೂ ಉಸಿರಾಟದ ತೊಂದರೆ ಉಂಟು ಮಾಡುತ್ತದೆ. ಪಶ್ಚಿಮ ಆಫ್ರಿಕಾ ಕ್ಲೇಡ್ ಕೊಂಚ ಕಡಿಮೆ ಅಪಾಯಕಾರಿಯಾಗಿದ್ದು, ದೇಹದಲ್ಲಿ ಗುಳ್ಳೆಗಳು ಹಾಗೂ ಜ್ವರದಂತಹ ಲಕ್ಷಣಗಳಿರುತ್ತವೆ. ಭಾರತದಲ್ಲಿ ಯಾವ ಮಾದರಿಯ ಎಂಪಾಕ್ಸ್ ಸೋಂಕು ಪತ್ತೆಯಾಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ.
ಸೋಂಕಿತ ಪ್ರಾಣಿಗಳ ನೇರ ಸಂಪರ್ಕದಿಂದ ಮನುಷ್ಯರಿಗೆ ಎಂಪಾಕ್ಸ್ ಹರಡುತ್ತದೆ. ಸೋಂಕಿತ ಮನುಷ್ಯನ ಉಸಿರಾಟದಿಂದ ಹೊರಬರುವ ಸೋಂಕಿನ ಕಣಗಳು ಬೇರೆಯವರಿಗೆ ತಗುಲಿ ಹರಡಬಹುದು. ಗರ್ಭಿಣಿಗೆ ಸೋಂಕು ತಗುಲಿದರೆ ಆಕೆಯಿಂದ ಭ್ರೂಣಕ್ಕೂ ತಗುಲುವ ಸಾಧ್ಯತೆ ಇರುವ ಎಂಪಾಕ್ಸ್ ಸೋಂಕಿಗೆ ಸದ್ಯಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಸೂಕ್ತ ಆರೈಕೆ ಹಾಗೂ ಔಷಧಗಳಿಂದ ರೋಗದ ಲಕ್ಷಣಗಳನ್ನು ಕ್ಷೀಣಗೊಳಿಸಬಹುದು. ಸಂಭಾವ್ಯ ಸೋಂಕು ಪರಿಸ್ಥಿತಿಯನ್ನು ಎದುರಿಸಲು ಎಲ್ಲ ಆಸ್ಪತ್ರೆಗಳನ್ನು ಸಿದ್ಧಪಡಿಸುವುದು ಅಗತ್ಯವಾಗಿದೆ.
ಭಾರತ ಮಾತ್ರವಲ್ಲದೇ ಇಡೀ ಜಗತ್ತೇ ನರಳುವಂತೆ ಮಾಡಿದ್ದ ಕೋವಿಡ್-19 ಸೋಂಕಿನಷ್ಟು ಎಂಪಾಕ್ಸ್ ಮಾರಣಾಂತಿಕವಲ್ಲ. ತಜ್ಞರ ಪ್ರಕಾರ ಕೋವಿಡ್‌ನಷ್ಟು ದೊಡ್ಡ ಮಟ್ಟದಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಉದ್ಭವಿಸುವ ಅವಕಾಶವೂ ಇಲ್ಲ. ಹಾಗೆಂದು ಮಂಗನ ಸಿಡುಬು ವಿಷಯದಲ್ಲಿ ನಿರ್ಲಕ್ಷÂ ವಹಿಸುವಂತೆಯೂ ಇಲ್ಲ. ಸಂಭಾವ್ಯ ಸೋಂಕು ಪ್ರಸರಣ ಹಾಗೂ ಆರೈಕೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಸಜ್ಜುಗೊಳಿಸುವುದು ಸರಕಾರದ ಮೊದಲ ಕರ್ತವ್ಯವಾಗಬೇಕು. ಈ ವಿಷಯದಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ಸಮನ್ವಯದ ಮೂಲಕ ಕೆಲಸ ಮಾಡುವುದು ಅತ್ಯಗತ್ಯವಾಗಿದೆ.
ಕೆಲವು ದಿನಗಳ ಹಿಂದೆ ನಮ್ಮ ನೆರೆಯ ಪಾಕಿಸ್ಥಾನದಲ್ಲಿ ಎಂಪಾಕ್ಸ್ ಸೋಂಕಿನ ಮೊದಲ ಪ್ರಕರಣ ಪತ್ತೆಯಾದಾಗಲೇ ಭಾರತವು ಮುನ್ನೆಚ್ಚರಿಕೆ ಕ್ರಮಗಳನ್ನು ಘೋಷಿಸಿತ್ತು. ಇದೀಗ ಮಂಕಿಪಾಕ್ಸ್ ಶಂಕಿತರನ್ನು ತಪಾಸಣೆಗೆ ಒಳಪಡಿಸಿ, ಶಂಕಿತರು ಹಾಗೂ ಕಾಯಿಲೆ ದೃಢಪಟ್ಟವರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾಗಿರಿಸುವುದು, ತರಬೇತಿ ಪಡೆದಿರುವ ವೈದ್ಯರು ಹಾಗೂ ಚಿಕಿತ್ಸೆಗೆ ಸಕಲ ಸೌಲಭ್ಯಗಳನ್ನು ಇರುವಂತೆ ನೋಡಿಕೊಳ್ಳುವುದು ಸೇರಿದಂತೆ ಹಲವು ಮಾರ್ಗದರ್ಶಿಗಳನ್ನು ಕೇಂದ್ರ ಇಲಾಖೆ ನೀಡಿದ್ದು, ಸ್ವಾಗತಾರ್ಹ ನಡೆಯಾಗಿದೆ. ಇದರ ಜತೆಗೆ, ಬಹಳ ಮುಖ್ಯವಾದ ಕೆಲಸ ಎಂದರೆ ಈಗಾಗಲೇ ಮಂಗನ ಸಿಡುಬು ಬಗ್ಗೆ ಜನರಲ್ಲಿ ಶುರುವಾಗಿರುವ ಭೀತಿಯನ್ನು ಹೋಗಲಾಡಿಸುವುದು. ಇದು ಮಹತ್ವದ ಹೆಜ್ಜೆಯಾಗಲಿದೆ. ಹಾಗಾಗಿ ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.