ಹೊಸದಿಲ್ಲಿ: ಪೂರ್ವ ಲಡಾಖ್‌ನಲ್ಲಿ ಎಲ್ಲೆಲ್ಲಿ ಭಾರತ-ಚೀನ ಯೋಧರು ವಾಪಸಾಗಿಲ್ಲವೋ ಅಂಥ ಎಲ್ಲ ಪ್ರದೇಶಗಳಲ್ಲೂ ಸಂಪೂರ್ಣವಾಗಿ ಸೇನೆ ವಾಪಸಾತಿ ಪ್ರಕ್ರಿಯೆ ನಡೆಸುವ ಕುರಿತು ಸದ್ಯದಲ್ಲೇ ಮತ್ತೂಂದು ಸುತ್ತಿನ ಮಾತುಕತೆ ನಡೆಯಲಿದೆ. ವಿದೇಶಾಂಗ ಸಚಿವಾಲಯವೇ ಈ ಮಾಹಿತಿ ನೀಡಿದೆ.
ಗಡಿ ವಿಚಾರಕ್ಕೆ ಸಂಬಂಧಿಸಿ ನಡೆದ ವರ್ಚುವಲ್ ಸಭೆಯೊಂದರಲ್ಲಿ, ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿನ ಸ್ಥಿತಿ ಬಗ್ಗೆ ಚರ್ಚಿಸಲಾಗಿದ್ದು, ದ್ವಿಪಕ್ಷೀಯ ಒಪ್ಪಂದಕ್ಕೆ ಅನುಗುಣವಾಗಿ ಉಭಯ ದೇಶಗಳು ಸಂಘರ್ಷ ಪ್ರದೇಶಗಳಿಂದ ಸೇನೆಗಳನ್ನು ಸಂಪೂರ್ಣವಾಗಿ ಹಿಂಪಡೆಯುವ ಸಂಬಂಧ ಸದ್ಯವೇ 14ನೇ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದೂ ಇಲಾಖೆ ಹೇಳಿದೆ.
ಕಾಂಗ್ರೆಸ್ ಪ್ರಶ್ನೆ: ಭೂತಾನ್ ಭೂಪ್ರದೇಶದೊಳಕ್ಕೆ ಚೀನ ಅತಿಕ್ರಮಣ ಮಾಡಿ, ಡೋಕ್ಲಾಂ ಸಮೀಪವೇ 4 ಗ್ರಾಮಗಳನ್ನು ನಿರ್ಮಿಸಿದ್ದರೂ ಪ್ರಧಾನಿ ಮೋದಿ ಮೌನ ವಹಿಸಿರುವುದೇಕೆ ಎಂದು ಕಾಂಗ್ರೆಸ್ ಗುರುವಾರ ಪ್ರಶ್ನಿಸಿದೆ. “ಇದೆಲ್ಲ 2021ರ ಮೇ-ನವೆಂಬರ್ ಅವಧಿಯಲ್ಲಿ ನಡೆದಿದ್ದು, ನಮ್ಮ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುವವರು ಯಾರು’ ಎಂದೂ ಮುಖ್ಯ ವಕ್ತಾರ ರಣದೀಪ್ ಸುಜೇìವಾಲ ಪ್ರಶ್ನಿಸಿದ್ದಾರೆ.
ಮತ್ತೂಂದು ಗ್ರಾಮ! :
ಅರುಣಾಚಲ ಪ್ರದೇಶದಲ್ಲಿ ಚೀನದ ದುಸ್ಸಾಹಸ ಮುಂದುವರಿದಿದ್ದು, 60 ಮನೆಗಳುಳ್ಳ ಮತ್ತೂಂದು ಗ್ರಾಮವನ್ನು ಚೀನ ಸೇನೆ ನಿರ್ಮಿಸಿದೆ ಎಂದು ಉಪಗ್ರಹ ಚಿತ್ರಗಳನ್ನು ಆಧರಿಸಿ ಎನ್‌ಡಿಟಿವಿ ವರದಿ ಮಾಡಿದೆ. 2019ರ ಉಪಗ್ರಹ ಚಿತ್ರಗಳಲ್ಲಿ ಈ ಪ್ರದೇಶದಲ್ಲಿ ಯಾವುದೇ ಕಟ್ಟಡಗಳಿರಲಿಲ್ಲ. ಆದರೆ ಈಗ 60 ಮನೆಗಳ ಸಮೂಹ ತಲೆಎತ್ತಿದೆ. ಅರುಣಾಚಲದಲ್ಲಿ ಈ ಹಿಂದೆ ಚೀನವು 100 ಮನೆಗಳ ಗ್ರಾಮ ನಿರ್ಮಿಸಿದ್ದು, ಅಲ್ಲಿಂದ 93 ಕಿ.ಮೀ. ದೂರದಲ್ಲಿ ಈಗ ಮತ್ತೂಂದು ಗ್ರಾಮ ನಿರ್ಮಿಸಲಾಗಿದೆ ಎಂದೂ ವರದಿ ಹೇಳಿದೆ.