Advertisement

ಭಾರತ ಮತ್ತು ಚೀನ: 3 ದಶಕದ ಗಡಿ ಒಪ್ಪಂದಗಳು

09:55 PM Jun 18, 2020 | Hari Prasad |

ಕಳೆದ ಮೂರು ದಶಕಗಳಲ್ಲಿ ಭಾರತ ಮತ್ತು ಚೀನ, ಗಡಿ ಪ್ರದೇಶಗಳಲ್ಲಿ ಶಾಂತಿಯನ್ನು ಖಚಿತಪಡಿಸಲು ಹಲವಾರು ದ್ವಿಪಕ್ಷೀಯ ಒಪ್ಪಂದಗಳಿಗೆ ಮತ್ತು ನಿಯಮಾವಳಿಗಳಿಗೆ ಸಹಿ ಹಾಕಿವೆ. ಆದರೆ ಚೀನ ಇವೆಲ್ಲವನ್ನೂ ನಿರಂತರ ಉಲ್ಲಂಘಿಸಿದೆ. ಈಗಲೂ ಚೀನ 1993, 1996 ಹಾಗೂ 2013ರಲ್ಲಿ ಗಡಿಯಲ್ಲಿ ಶಾಂತಿಸ್ಥಾಪನೆಗಾಗಿ ಮಾಡಿಕೊಳ್ಳಲಾಗಿದ್ದ ಒಪ್ಪಂದ­ಗಳನ್ನು ಮುರಿದಿದೆ ಎನ್ನುವುದು ಭಾರತದ ಆರೋಪ…

Advertisement

1993


ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವಧಿಯಲ್ಲಿ ಆದ ಒಪ್ಪಂದವು, ಭಾರತ ಚೀನ ಗಡಿ ಪ್ರದೇಶಗಳಲ್ಲಿನ ವಾಸ್ತವ ಗಡಿ ರೇಖೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎನ್ನುತ್ತದೆ. ಮುಖ್ಯವಾಗಿ, LAC (ವಾಸ್ತವಿಕ ಗಡಿ ರೇಖೆ)ಯನ್ನು ಎದುರಾಳಿ ಸೈನಿಕರು ದಾಟಿ ಬಂದದ್ದು ತಿಳಿದಾಕ್ಷಣ ಅವರಿಗೆ ಸಂದೇಶ ತಲುಪಿಸಬೇಕು, ಸಂದೇಶ ಬರುತ್ತಿದ್ದಂತೆಯೇ ಗಡಿ ದಾಟಿ ಬಂದವರು ತಮ್ಮ ಪ್ರದೇಶಕ್ಕೆ ಹಿಂದಿರುಗಬೇಕು. ಎಲ್‌ಎಸಿ ಕುರಿತ ಅನುಮಾನಗಳಿದ್ದರೆ ಎರಡೂ ಕಡೆಯವರೂ ಜಂಟಿಯಾಗಿ ಪರೀಕ್ಷಿಸಬೇಕು ಎನ್ನುತ್ತದೆ ಈ ಒಪ್ಪಂದ.

1996


ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ನಡೆದ ಈ ಒಪ್ಪಂದವು, ಯಾವುದೇ ಕಾರಣಕ್ಕೂ ವಾಸ್ತವಿಕ ಗಡಿ ರೇಖೆಯ ಸನಿಹದ 2 ಕಿ.ಮಿ. ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆಸಬಾರದು ಎನ್ನುತ್ತದೆ. ಅಲ್ಲದೇ, ಎರಡೂ ಕಡೆಯ ಸೈನಿಕರು ಎಲ್‌ಎಸಿ ಕುರಿತ ಭಿನ್ನಾಭಿಪ್ರಾಯಗಳಿಂದ ಮುಖಾಮುಖೀಯಾದರೆ, ಪರಿಸ್ಥಿತಿ ವಿಕೋಪಕ್ಕೆ ತಲುಪದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೇ ರಾಜತಾಂತ್ರಿಕ ಅಥವಾ ಅನ್ಯ ಮಾರ್ಗಗಳ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು ಎನ್ನುತ್ತದೆ.

2013


ಮನಮೋಹನ್‌ ಸಿಂಗ್‌ ಅವಧಿಯಲ್ಲಿ ನಡೆದ ಒಪ್ಪಂದವು, ಗಡಿ ರೇಖೆಯು ಸ್ಪಷ್ಟವಾಗಿರುವ ಜಾಗದಲ್ಲಿ ಪರಸ್ಪರ ಸೈನಿಕರು ಗಸ್ತು ತಿರುಗಬಾರದು, ಹಿಂಬಾಲಿಸಬಾರದು ಎನ್ನುತ್ತದೆ. ಒಂದು ವೇಳೆ ಪರಸ್ಪರ ಸೈನಿಕರು ಮುಖಾಮುಖೀಯಾದರೆ, ಕೂಡಲೇ ಅವರು ಹಿಂದೆ ಸರಿದು, ತಮ್ಮ ಉನ್ನತಾಧಿಕಾರಿಗಳಿಗೆ ವಿಚಾರ ಮುಟ್ಟಿಸಬೇಕು ಎನ್ನುತ್ತದೆ.

2014


ಈ 3 ಪ್ರಮುಖ ಒಪ್ಪಂದಗಳಷ್ಟೇ ಅಲ್ಲದೆ, 2003ರಲ್ಲಿ ಪ್ರಧಾನಿ ವಾಜಪೇಯಿಯವರು ಚೀನಕ್ಕೆ ಹೋದಾಗಲೂ ಗಡಿ ವಿವಾದ ಭುಗಿಲೇಳದಂತೆ ನೋಡಿಕೊ­ಳ್ಳಲು ಒಪ್ಪಂದ ಮಾಡಿಕೊಂಡಿದ್ದರು. ಇದೇ ರೀತಿಯೇ 2005ರಲ್ಲಿ , 2012ರಲ್ಲಿ ಮನಮೋಹನ್‌ ಸರ್ಕಾರದಲ್ಲೂ ಚೀನದೊಂದಿಗೆ ಒಪ್ಪಂದಗಳಾಗಿದ್ದವು. 2014ರಿಂದ ಪ್ರಧಾನಿ ಮೋದಿ ಅವಧಿಯಲ್ಲೂ ಗಡಿ ಭಾಗದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅನೇಕ ಮಾತುಕತೆಗಳು ನಡೆದಿವೆ. ಇದುವರೆಗೂ ಮೋದಿ ಮತ್ತು ಜಿನ್‌ಪಿಂಗ್‌ 18 ಬಾರಿ ಭೇಟಿಯಾಗಿದ್ದು, ಪ್ರತಿಭೇಟಿಯಲ್ಲೂ ಗಡಿ ವಿವಾದದ ಚರ್ಚೆಗಳು ನಡೆದಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next