Advertisement

ಭಾರತ-ಚೀನ ಹೊಸ ಸ್ನೇಹ

08:15 AM Sep 06, 2017 | Harsha Rao |

ಕ್ಸಿಯಾಮೆನ್‌: ಡೋಕ್ಲಾಮ್‌ ಮೂಲಕ ಹಳಿತಪ್ಪಿದ್ದ ಭಾರತ- ಚೀನ ಸಂಬಂಧ ಮತ್ತೆ ಹಳಿಗೆ ಬಂದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ನಡೆಸಿದ ರಚನಾತ್ಮಕ ಮಾತುಕತೆಯು ಫ‌ಲಪ್ರದವಾಗಿದ್ದು, ಎರಡೂ ದೇಶಗಳು “ಯುದೊನ್ಮಾದ’ವನ್ನು ಬಿಟ್ಟು ಶಾಂತಿ ಮಂತ್ರ ಪಠಿಸಿವೆ.

Advertisement

ಚೀನದ ಕ್ಸಿಯಾಮೆನ್‌ನಲ್ಲಿ ನಡೆದ ಬ್ರಿಕ್ಸ್‌ ರಾಷ್ಟ್ರಗಳ ಶೃಂಗದಲ್ಲಿ ಜಾಗತಿಕ ಸಮಸ್ಯೆ ಗಳ ಮುಂದೆ “ಡೋಕ್ಲಾಮ್‌ ಬಿಕ್ಕಟ್ಟು’ ಕುರಿತು ಮಾತು ಕತೆ ಗೌಣವಾಗಿ ಹೋಗು ತ್ತದೆಯೇ ಎಂಬ ಆತಂಕ ವನ್ನು ಉಭಯ ನಾಯ ಕರೂ ದೂರ ಮಾಡಿದ್ದಾರೆ. ಮಂಗಳವಾರ ಮೋದಿ, ಜಿನ್‌ಪಿಂಗ್‌ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆ ಸಿದ್ದು, ಗಡಿ ವಿವಾದದ ಕುರಿತು ಚರ್ಚಿಸಲೆಂದೇ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದು ಕಂಡುಬಂತು. ಆರಂಭದಲ್ಲಿ 30 ನಿಮಿಷಗಳ ಕಾಲ ಮಾತುಕತೆಗೆ ಸಮಯ ನಿಗದಿಯಾಗಿತ್ತಾದರೂ ಮಾತುಕತೆ ಒಂದು ಗಂಟೆ ಕಾಲ ಮುಂದುವರಿಯಿತು.

ಸಿಕ್ಕಿಂ ಗಡಿಯಲ್ಲಿ 73 ದಿನಗಳ ಕಾಲ ನಡೆದ ಪ್ರಕ್ಷುಬ್ಧ ವಾತಾವರಣದ ಕುರಿತು ಇಬ್ಬರು ನಾಯಕರೂ ಮುಕ್ತವಾಗಿ ಚರ್ಚಿಸಿದ್ದು, ಹಿಂದಿನ ಎಲ್ಲದನ್ನೂ ಮರೆತು ಉತ್ತಮ ಬಾಂಧವ್ಯವನ್ನು ಮುಂದುವರಿಸುವ ನಿರ್ಧಾರ ಕೈಗೊಂಡರು. ಎರಡೂ ದೇಶಗಳು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಗಡಿಯಲ್ಲಿ ಶಾಂತಿ ಹಾಗೂ ಸಮಗ್ರತೆ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆಯಿಡುವ ನಿರ್ಧಾರಕ್ಕೆ ಬಂದವು. ಜತೆಗೆ, ಉಭಯ ದೇಶಗಳ ಗಡಿ ಮತ್ತು ರಕ್ಷಣಾ ಸಿಬಂದಿಯ ನಡುವೆ ಸಹಕಾರ ಏರ್ಪಡಿಸುವ ಮೂಲಕ, ಅವರಲ್ಲಿ ವಿಶ್ವಾಸ ವರ್ಧಿಸುವುದಕ್ಕೆ ಆದ್ಯತೆ ನೀಡಲು ಒಪ್ಪಿಕೊಳ್ಳಲಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಮಾಹಿತಿ ನೀಡಿದ್ದಾರೆ. “ಹಾಗಾದರೆ, ಡೋಕ್ಲಾಮ್‌ ವಿವಾದವು ಮುಗಿದ ಅಧ್ಯಾಯವೇ’ ಎಂಬ ಪತ್ರಕರ್ತರ ಪ್ರಶ್ನೆಗೆ ಜೈಶಂಕರ್‌ ಅವರು, “ಮೋದಿ-ಜಿನ್‌ಪಿಂಗ್‌ ಮಾತುಕತೆ ಭವಿಷ್ಯದ ದೃಷ್ಟಿಯಿಂದ ನಡೆದಿದೆಯೇ ಹೊರತು ಹಿಂದಿನದನ್ನು ಕೆದಕುವುದರಿಂದ ಪ್ರಯೋಜನವಿಲ್ಲ’ ಎಂದಿದ್ದಾರೆ.

2013ರಲ್ಲಿ ದೆಪ್ಸಾಂಗ್‌ನಲ್ಲಿಯೂ 21 ದಿನಗಳ ಕಾಲ ಪ್ರಕ್ಷುಬ್ಧ ವಾತಾ ವರಣ ನಿರ್ಮಾಣವಾಗಿದ್ದ ಸಂದರ್ಭದಲ್ಲಿ, ಗಡಿ ರಕ್ಷಣೆ ಮತ್ತು ಸಹಕಾರ ಒಪ್ಪಂದದ ಮೂಲಕ ಎಲ್ಲವನ್ನೂ ತಿಳಿಗೊಳಿಸಲಾಗಿತ್ತು. ಅದೇ ಮಾದರಿ ಯನ್ನು ಡೋಕ್ಲಾಂನಲ್ಲಿಯೂ ಅನುಸರಿಸುವ ಪ್ರಯತ್ನ ಈಗ ನಡೆದಿದೆ.

ಮ್ಯಾನ್ಮಾರ್‌ಗೆ ಮೋದಿ: ಬ್ರಿಕ್ಸ್‌ ಶೃಂಗಸಭೆ ಮುಗಿಸಿದ ಬಳಿಕ ಪ್ರಧಾನಿ ಮೋದಿ ಅವರು ಮಂಗಳವಾರವೇ ಮ್ಯಾನ್ಮಾರ್‌ಗೆ ತೆರಳಿದ್ದಾರೆ.

Advertisement

ಅಡಕತ್ತರಿಯಲ್ಲಿ ಚೀನ; ಗೊಂದಲದಲ್ಲಿ ಪಾಕಿಸ್ಥಾನ ಜಗತ್ತಿನ ಯಾರೇ ನಮಗೆ ಎದುರಾಗಿ ನಿಂತರೂ ಚೀನ ನಮ್ಮ ಜತೆಗಿದೆ ಎಂದು ಬೀಗುತ್ತಿದ್ದ ಪಾಕಿಸ್ಥಾನಕ್ಕೆ ಸೋಮವಾರ ಬ್ರಿಕ್ಸ್‌ ಶೃಂಗದಲ್ಲಿ ಕೈಗೊಂಡ “ನಿರ್ಣಯ’ವು ಆಘಾತ ಹಾಗೂ ಹತಾಶೆ ಮೂಡಿಸಿದೆ. ಉಗ್ರ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕು ಎನ್ನುವ ಭಾರತದ ಬೇಡಿಕೆಗೆ ಈವರೆಗೆ ಅಡ್ಡಗಾಲು ಹಾಕಿಕೊಂಡೇ ಬಂದಿದ್ದ ಚೀನಕ್ಕೂ ಈಗ ತನ್ನ ನೆಲದಲ್ಲೇ ಕೈಗೊಂಡ ನಿರ್ಣಯವು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾವುದೇ ಕಾರಣಕ್ಕೂ ಚೀನ ನಮ್ಮನ್ನು ವಿರೋಧಿಸುವುದಿಲ್ಲ ಎಂದು ಪಾಕಿಸ್ಥಾನ ಈವರೆಗೆ ಭಾವಿಸಿತ್ತು. ಚೀನ ಕೂಡ ಅದಕ್ಕೆ ಪುಷ್ಟಿ ನೀಡುವಂತೆ ವರ್ತಿಸುತ್ತಿತ್ತು. ಆದರೆ, ಈಗ ಚೀನದ ನೆಲದಲ್ಲೇ ನಡೆದ ಬ್ರಿಕ್ಸ್‌ ಶೃಂಗದಲ್ಲಿ ಪಾಕ್‌ ಉಗ್ರ ಸಂಘಟನೆಗಳ ಹೆಸರನ್ನು ಪ್ರಸ್ತಾವಿಸಿ ನಿರ್ಣಯ ಕೈಗೊಂಡಿರುವ ಕಾರಣ, ಅಜರ್‌ ಸಹಿತ ಎಲ್ಲ ಉಗ್ರ ಸಂಘಟನೆಗಳ ವಿರುದ್ಧವೂ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ಚೀನಕ್ಕೆ ಎದುರಾಗಿದೆ. ಇನ್ನೊಂದೆಡೆ, ಇದರಿಂದ ಕೆಂಡಾಮಂಡಲ ವಾಗಿರುವ ಪಾಕಿಸ್ಥಾನ, “ನಾವು ಬ್ರಿಕ್ಸ್‌ ನಿರ್ಣಯವನ್ನು ಒಪ್ಪುವುದಿಲ್ಲ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next