Advertisement

ಚೀನ-ನೇಪಾಲ ತಂಟೆ : ಕೋವಿಡ್ ಸಮಯದಲ್ಲಿ ಗದ್ದಲ

03:53 AM May 22, 2020 | Hari Prasad |

ಈಗ ಮತ್ತೂಮ್ಮೆ ಲಡಾಖ್‌ ಹಾಗೂ ಸಿಕ್ಕಿಂ ಪ್ರದೇಶಗಳ ಬಳಿ ಭಾರತ ಮತ್ತು ಚೀನ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ.

Advertisement

ಹೆಚ್ಚಿನ ಸಂಖ್ಯೆಯಲ್ಲಿ ಚೀನದ ಸೈನಿಕರು ಜಮೆಯಾಗುತ್ತಿದ್ದಂತೆಯೇ ಇತ್ತ ಭಾರತವೂ ನಮ್ಮ ಸೈನಿಕರನ್ನು ಸಜ್ಜುಗೊಳಿಸಿದ್ದು, ಚೀನದ ಈ ಅಪ್ರಚೋದಿತ ವರ್ತನೆಗೆ ಕಾರಣವೇನಿರಬಹುದು ಎಂಬ ಅನುಮಾನವಂತೂ ಭಾರತಕ್ಕೆ ದಟ್ಟವಾಗಿದೆ.

ಆದಾಗ್ಯೂ ಈ ಕ್ಷೇತ್ರಗಳಲ್ಲಿ ಎರಡೂ ರಾಷ್ಟ್ರಗಳ ನಡುವಿನ ಗಡಿ ವಿವಾದ ಹೊಸತಲ್ಲವಾದರೂ, ಕೋವಿಡ್ ಸಂಕಷ್ಟದ ಈ ಸಮಯದಲ್ಲೂ ಚೀನ ತನ್ನ ವಿಸ್ತರಣಾವಾದಿ ದುರ್ಬುದ್ಧಿಯನ್ನು ಬಿಡದೇ ಇರುವುದು ನಿಜಕ್ಕೂ ದುರಂತವೇ ಸರಿ.

ಭಾರತಕ್ಕಿಂತೂ ಇದು ಸವಾಲಿನ ಸಮಯ. ಅತ್ತ ಪಾಕಿಸ್ತಾನವು ನಿತ್ಯ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಾ, ಉಗ್ರರನ್ನು ನುಸುಳಿಸಲು ಪ್ರಯತ್ನಿಸುತ್ತಿದ್ದರೆ, ಇತ್ತ ಚೀನದ ಹಾವಳಿ. ಇನ್ನೊಂದೆಡೆ ಈ ಸಾಲಿಗೆ ನೇಪಾಲ ಕೂಡ ಸೇರಿಕೊಂಡಿದೆ.

ಕೆ.ಪಿ. ಶರ್ಮಾ ಓಲಿ ನೇತೃತ್ವದ ನೇಪಾಲ ಸರ್ಕಾರವೀಗ ಭಾರತಕ್ಕೆ ಸೇರಿದ ಪ್ರದೇಶವನ್ನು ತನ್ನದೆಂದು ಹೇಳುತ್ತಾ ನಕ್ಷೆಯನ್ನು ಬಿಡುಗಡೆಗೊಳಿಸಿದೆ. ಹಠಾತ್ತನೆ ನೇಪಾಲ ಎತ್ತಿರುವ ಈ ಭೂತಕರಾರಿನ ಹಿಂದೆ ನಿಸ್ಸಂಶಯವಾಗಿಯೂ ಚೀನದ ಕುಮ್ಮಕ್ಕು ಇದೆ.

Advertisement

ಕಮ್ಯುನಿಸ್ಟ್‌ ಕೆ.ಪಿ. ಶರ್ಮಾ ಹಾಗೂ ಚೀನ ನಡುವಿನ ಸ್ನೇಹ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಲೇ ಸಾಗಿದೆ. ಭಾರತವನ್ನು ಏನಕೇನ ಸುತ್ತುವರಿಯಬೇಕು ಎಂಬ ಚೀನದ ಮಹತ್ವಾಕಾಂಕ್ಷೆಗೆ ಈಗ ನೇಪಾಲ ಬಹುಮುಖ್ಯ ದಾಳವಾಗಿ ಬದಲಾಗಿದೆ.

ವಾಸ್ತವದಲ್ಲಿ ನೇಪಾಲ, ಸಿಕ್ಕಿಂ ಮತ್ತು ಭೂತಾನವನ್ನು ಚೀನ, ಭಾರತದ ವಿರುದ್ಧದ ಸಾಮರಿಕ ದೃಷ್ಟಿಯಿಂದ ಮಹತ್ವದ ಕ್ಷೇತ್ರಗಳೆಂದು ಭಾವಿಸುತ್ತದೆ. ಈ ಕಾರಣಕ್ಕಾಗಿಯೇ ಅದು ಡೋಕ್ಲಾಂನಲ್ಲಿ ರಸ್ತೆ ನಿರ್ಮಾಣ ಆರಂಭಿಸಿತ್ತು.

ಆ ಮೂಲಕ ಭಾರತದ ಪೂರ್ವೋತ್ತರ ಭಾಗಗಳ ಜತೆಗಿನ ಸಂಪರ್ಕ ಸುಲಭವಾಗಬಹುದು ಹಾಗೂ ಭಾರತೀಯ ಸೈನಿಕರ ಕಣ್ಗಾವಲು ಶಕ್ತಿಯನ್ನು ತಗ್ಗಿಸಬಹುದು ಎಂಬ ದುರಾಲೋಚನೆ ಚೀನದ್ದು. ಆದರೆ, ಯಾವಾಗ ಭೂತಾನ್‌ ಚೀನದ ಈ ನಡೆಗೆ ವಿರೋಧ ವ್ಯಕ್ತಪಡಿಸಿತೋ, ಭಾರತ ಕೂಡ ಖಡಕ್‌ ಎಚ್ಚರಿಕೆಯನ್ನೇ ನೀಡಿತ್ತು. ಡೋಕ್ಲಾಂ ವಿಷಯದಲ್ಲಿ ಎರಡೂ ದೇಶಗಳ ನಡುವೆ ಬಿಕ್ಕಟ್ಟು ಹೆಚ್ಚುತ್ತಾ ಹೋಗಿ, ಕೊನೆಗೂ ಚೀನ ಹಿಂದೆ ಸರಿಯುವಂತಾಗಿತ್ತು.

ಸತ್ಯವೇನೆಂದರೆ, ಲಿಪುಲೇಖ್‌ನಲ್ಲಿ ಭಾರತದ ರಸ್ತೆ ನಿರ್ಮಾಣವಾಗುತ್ತಿದ್ದಂತೆಯೇ, ಭಾರತೀಯ ಸೈನಿಕರಿಗೆ ಚೀನದ ಗಡಿ ಭಾಗದಲ್ಲಿನ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ, ಚೀನ ನೇಪಾಳವನ್ನು ಎತ್ತಿಕಟ್ಟುತ್ತಿರುವುದು.

ಲಿಪುಲೇಖ್‌ ಪ್ರದೇಶದಲ್ಲಿ ಭಾರತವು ರಸ್ತೆ ನಿರ್ಮಾಣದ ವಿಚಾರದಲ್ಲಿ ನೇಪಾಳದ ಜತೆಗೆ ಬಹಳ ಹಿಂದೆಯೇ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈಗಿನ ನೇಪಾಲ ಪ್ರಧಾನಮಂತ್ರಿಗಳು ಆ ಒಪ್ಪಂದಕ್ಕೆ ಮನ್ನಣೆ ನೀಡಲು ಒಪ್ಪುತ್ತಿಲ್ಲ.

ಒಟ್ಟಲ್ಲಿ ಭಾರತದ ಬಗ್ಗೆ ನೇಪಾಳದ ಬದಲಾದ ಈ ಧೋರಣೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನೂ ಅಲ್ಲ. ನಿಸ್ಸಂಶಯವಾಗಿಯೂ ಇದರ ಹಿಂದೆ ಚೀನದ ಕುತಂತ್ರ ಕೆಲಸ ಮಾಡುತ್ತಿದೆ. ಆದಾಗ್ಯೂ, ವ್ಯಾಪಾರಿ ಬುದ್ಧಿಯ ಚೀನಕ್ಕೆ ಮುಂದಿನ ದಿನಗಳಲ್ಲಿ ಭಾರತದೊಂದಿಗೆ ವ್ಯವಹಾರ ಅನಿವಾರ್ಯವೂ ಹೌದು.

ಕೋವಿಡ್ ನಿಂದಾಗಿ ಅದರ ಜಾಗತಿಕ ವರ್ಚಸ್ಸಿಗೆ ಬಹಳ ಪೆಟ್ಟು ಬಿದ್ದಿದೆ. ಇನ್ನು ನೇಪಾಳವೂ ಕೂಡ ಈ ವಿಚಾರದಲ್ಲಿ ಚೀನದ ತಾಳಕ್ಕೆ ತಕ್ಕಂತೆ ಹೆಚ್ಚು ದಿನ ಕುಣಿಯಲಾರದು. ಹೀಗಾಗಿ, ಪ್ರಸಕ್ತ ಬಿಕ್ಕಟ್ಟು ತಾತ್ಕಾಲಿಕ ಮಾತ್ರ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next